Saturday, July 6, 2024

ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ನಿಗೂಢವಾಗಿ 5 ಮಕ್ಕಳು ಸಾವು!

ಮಧ್ಯಪ್ರದೇಶ್​: ನಿಖರವಾಗಿ ಏನಾಗಿದೆ ಅಂತಾ ಈವರೆಗೂ ಗೊತ್ತಾಗಿಲ್ಲ. ಆದರೆ ಈ ಬುದ್ಧಿ ಮಾಂದ್ಯ ಶಾಲೆಯಲ್ಲಿ ಐವರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಐವರು ಮಕ್ಕಳು ಸಾವನ್ನಪ್ಪಿರೋದು ಆಘಾತ ತಂದಿದೆ. ಜೊತೆಗೆ ಇನ್ನೂ ಹಲವಾರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಆಸ್ಪತ್ರೆಗೆ ಒಟ್ಟಾರೆ 38 ಮಕ್ಕಳು ದಾಖಲಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀ ಯುಗಪುರುಷ ಧಾಮ ಬೌದ್ಧಿಕ ವಿಕಾಸ ಕೇಂದ್ರದಲ್ಲಿ ಈ ರೀತಿಯ ದುರ್ಘಟನೆ ನಡೆದಿದೆ. ಫುಡ್ ಪಾಯ್ಸನ್ನಿಂದಾಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಜೂನ್ 30ರಂದು ಊಟ ಮಾಡಿದ ಬಳಿಕ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಕೂಡಲೇ ಅಂತಹ ಮಕ್ಕಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅದೇ ದಿನ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಅದಾದ ಬಳಿಕ ಜುಲೈ ಒಂದರಂದು ಮತ್ತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಇವತ್ತು ಮತ್ತೆ ಒಂದು ಮಗು ಸಾವನ್ನಪ್ಪಿರುವುದು ಆಘಾತ ತಂದಿದೆ.

ಇದನ್ನೂ ಓದಿ: ಸಾವಿನ ಸತ್ಸಂಗ..! ಯಾರು ಈ ಭೋಲೆ ಬಾಬಾ?

ಇಂತಹದೊಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿರುವುದು, ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಬುದ್ಧಿ ಮಾಂದ್ಯ ಮಕ್ಕಳ ಶಾಲೆ. 200ಕ್ಕಿಂತ ಹೆಚ್ಚು ಮಕ್ಕಳು ಈ ಆಶ್ರಮದಲ್ಲಿದ್ದು, ಜೂನ್ 30ರ ಘಟನೆಯ ಬಳಿಕ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆ ಪೈಕಿ ಒಟ್ಟು 38 ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಮುಂದಿನ 48 ಗಂಟೆಗಳ ಕಾಲ ಅಂತಹ ಮಕ್ಕಳ ಮೇಲೆ ನಿಗಾ ಇಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಈ ಬುದ್ಧಿಮಾಂದ್ಯ ಮಕ್ಕಳ ಶಾಲೆ ಉತ್ತಮವಾಗಿದೆ ಎಂಬ ಪ್ರಶಂಸೆಯನ್ನು ಪಡೆದಿದೆ. ಸ್ಥಳೀಯ NGO ಈ ಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ರಾಜ್ಯದ ವಿವಿಧ ಕಡೆಗಳಿಂದ ಇಲ್ಲಿ ಮಕ್ಕಳು ದಾಖಲಾಗಿದ್ದರು. ಸದ್ಯ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ. ಸ್ಥಳೀಯ ಜಿಲ್ಲಾಧಿಕಾರಿ ಮತ್ತು ಇಬ್ಬರು ಸಚಿವರು ಸಹ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಶಾಲೆಯ ಮೂಲ ಸೌಕರ್ಯಗಳು ಮತ್ತು ಅಡುಗೆ ವ್ಯವಸ್ಥೆಯ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗಿದೆ.

RELATED ARTICLES

Related Articles

TRENDING ARTICLES