Monday, July 1, 2024

ಟೆಸ್ಟ್​​ನಲ್ಲಿ ಟೀಂ ಇಂಡಿಯಾ ನಾರಿಯರ ದಾಖಲೆಗಳ ಸುರಿಮಳೆ.. ಇನ್ನಿಂಗ್ಸ್​​ನಲ್ಲಿ 600 ಪ್ಲಸ್ ರನ್

ವೆಸ್ಟ್ ಇಂಡೀಸ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಪಡೆ ಟಿ-20 ವಿಶ್ವಕಪ್ ಮುಖಾಮುಖಿ ಆಗುವ ಹೊತ್ತಿಗೆ, ಚೆನ್ನೈನಲ್ಲಿ ಅದೇ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡದ ವಿರುದ್ಧ ಹರ್ಮನ್ ಪ್ರೀತ್ ಕೌರ್ ಪಡೆ ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಿತ್ತು.

ಹೌದು.. ಚಿದಂಬರಂ ಕ್ರೀಡಾಂಗಣದಲ್ಲಿ ಆಫ್ರಿಕಾ ನಾರಿಯರ ವಿರುದ್ಧ ಭಾರತೀಯ ಮಹಿಳಾ ತಂಡ ಏಕೈಕ ಟೆಸ್ಟ್ ಪಂದ್ಯ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ನಾರಿಯರು, ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೂ ಹೊಸ ಹೊಸ ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಿದ್ದಾರೆ.

ಆಫ್ರಿಕಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್​​ನಷ್ಟಕ್ಕೆ 603 ರನ್​ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್​​ನಲ್ಲಿ 600ಕ್ಕೂ ಹೆಚ್ಚು ರನ್​ಗಳಿಸಿದ ಮೊದಲ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ. ಈವರೆಗೆ ಮಹಿಳಾ ಕ್ರಿಕೆಟ್​​ನಲ್ಲಿ ಯಾವುದೇ ತಂಡ 600 ರನ್ ಗಳಿಸಿರಲಿಲ್ಲ. 1998ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 595 ರನ್​ಗಳಿಗೆ ಆಲೌಟ್ ಆಗಿದ್ದೇ, ಇನ್ನಿಂಗ್ಸ್​ವೊಂದರಲ್ಲಿ ಈವರೆಗಿನ ಅತಿ ಹೆಚ್ಚು ರನ್ ಗಳಿಕೆಯಾಗಿತ್ತು. ಇದೀಗ 600ಕ್ಕೂ ಹೆಚ್ಚು ರನ್ ಗಳಿಸಿರುವ ಹರ್ಮನ್ ಪ್ರೀತ್ ಪಡೆ ಮಹಿಳಾ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದೆ.

603 ರನ್ ಗಳಿಸಲು ಟೀಂ ಇಂಡಿಯಾ ನಾರಿಯರು ಕೇವಲ 115.1 ಓವರ್ ಎದುರಿಸಿದ್ದಾರೆ. ಪ್ರತಿ ಓವರ್​​ಗೆ ಸರಾಸರಿ 5ಕ್ಕಿಂತ ಹೆಚ್ಚು ರನ್ ಗಳಿಸಿರುವುದು ಕೂಡ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ದಾಖಲೆಯಾಗಿದೆ. 250ಕ್ಕಿಂತ ಹೆಚ್ಚು ರನ್ ಗಳಿಸಿದ ಯಾವುದೇ ಸಂದರ್ಭದಲ್ಲೂ ಯಾವುದೇ ತಂಡ ಈ ವೇಗದಲ್ಲಿ ರನ್ ಗಳಿಕೆ ಮಾಡಿಲ್ಲ. ಇನ್ನಿಂಗ್ಸ್ ಆರಂಭಿಸಿದ್ದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನಾ ಜೋಡಿ, ಭರ್ಜರಿ ಶತಕಗಳ ಜೊತೆಯಾಟವಾಡಿದೆ. ಶಫಾಲಿ ಕೇವಲ 197 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 23 ಬೌಂಡರಿ ಸಹಿತ 205 ರನ್ ಗಳಿಸಿ, ದ್ವಿಶತಕ ಸಿಡಿಸಿದ ಭಾರತದ ಎರಡನೇ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಸ್ಮೃತಿ ಮಂದಾನಾ 1 ಸಿಕ್ಸರ್ ಮತ್ತು 27 ಬೌಂಡರಿ ಚಚ್ಚಿ 149 ರನ್​ಗಳಿಗೆ ಔಟಾಗಿದ್ದಾರೆ.

ಟೀಮ್ ಇಂಡಿಯಾ ನಾರಿಯರು ಒಟ್ಟಾರೆ 80 ಬೌಂಡರಿ ಸಿಡಿಸಿದ್ದು ಕೂಡ ಮಹಿಳಾ ಕ್ರಿಕೆಟ್ ಟೆಸ್ಟ್​​ನಲ್ಲಿ ದಾಖಲೆಯಾಗಿದೆ. ಮೊದಲ ದಿನವೇ 4 ವಿಕೆಟ್​ನಷ್ಟಕ್ಕೆ 525 ರನ್ ಗಳಿಸಿದ್ದು ಕೂಡ ಯಾವುದೇ ಟೆಸ್ಟ್​​ನಲ್ಲಿ ದಾಖಲೆಯಾಗಿದೆ. ಪುರುಷರ ಕ್ರಿಕೆಟ್​​ನಲ್ಲಿ ಸಹ ಕೇವಲ ಒಂದು ಬಾರಿ ಮಾತ್ರ ಒಂದೇ ದಿನಕ್ಕೆ 500 ರನ್​ಗಳು ದಾಖಲಾಗಿವೆ. ಬಾಂಗ್ಲಾ ವಿರುದ್ಧ ಶ್ರೀಲಂಕಾ 9 ವಿಕೆಟ್​​ಗೆ 509 ರನ್ ಗಳಿಸಿದ್ದೇ ಈವರೆಗೆ, ಒಂದೇ ದಿನದಲ್ಲಿನ ಅತಿ ಹೆಚ್ಚು ರನ್ ಗಳಿಕೆ ಆಗಿತ್ತು.

ಇನ್ನು ಶಫಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದು ಕೂಡ ಅತಿ ವೇಗದ ಡಬಲ್ ಸೆಂಚುರಿ ಅನ್ನೋ ದಾಖಲೆಗೆ ಪಾತ್ರವಾಗಿದೆ. ಅಲ್ಲದೇ ಮಹಿಳಾ ಕ್ರಿಕೆಟ್ ಇನ್ಸಿಂಗ್ಸ್ ನಲ್ಲಿ 8 ಸಿಕ್ಸರ್ ಬಾರಿಸಿದ್ದು ಕೂಡ ಹೊಸ ದಾಖಲೆಯಾಗಿದೆ. ಟೆಸ್ಟ್​​ನಲ್ಲಿ ಯಾವುದೇ ಮಹಿಳಾ ಬ್ಯಾಟರ್ ಎರಡಕ್ಕಿಂತ ಹೆಚ್ಚು ಸಿಕ್ಸರ್ ಹೊಡೆದಿಲ್ಲ. ಇನ್ನು ಮೊದಲ ವಿಕೆಟ್​​ಗೆ ಸ್ಮೃತಿ ಮತ್ತು ಶಫಾಲಿ 292 ರನ್​ಗಳಿಸಿದ್ದು ಕೂಡ ದಾಖಲೆಯಾಗಿದೆ.

RELATED ARTICLES

Related Articles

TRENDING ARTICLES