Friday, July 5, 2024

ಇಂದು ಸಂಜೆ 7.15ಕ್ಕೆ ಮೋದಿ ಪದಗ್ರಹಣ: ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ

ದೆಹಲಿ: NDA ಸಂಸದೀಯ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಇಂದು ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಮತ್ತು ಅವರ ಸಂಪುಟದ ಕೆಲವು ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಮೋದಿ ನಮನ:

ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಹಾತ್ಮ ಗಾಂಧಿ ಮತ್ತು ವಾಜಪೇಯಿ ಸಮಾಧಿ ಬಳಿಗೆ ತೆರಳಿ ಗೌರವ ವಂದನೆ ಸಲ್ಲಿಸಿದರು.

ಮೊದಲಿಗೆ ರಾಜಘಾಟ್​​ಗೆ ತೆರಳಿ, ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದ ಮೋದಿ, ತದನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ತೆರಳಿ ಗೌರವ ವಂದನೆ ಸಲ್ಲಿಸಿದರು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಮೂರು ಸೇನಾಪಡೆಗಳು ಮುಖ್ಯಸ್ಥರು ಮೋದಿ ಅವರಿಗೆ ಸಾಥ್ ನೀಡಿದರು.

ಮೋದಿ ಪ್ರಮಾಣವಚನ; ಗಣ್ಯರ ದಂಡು:

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಇನ್ನು ಇಂದು ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಗಣ್ಯರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಡಿಕೆ ಸುರೇಶ್​ ಸೋಲಿಗೆ ಸಿದ್ದರಾಮಯ್ಯ ಅಂಡ್​ ಟೀಂ ಕಾರಣ: ಶಾಸಕ ಸುರೇಶ್ ಗೌಡ

ಮೋದಿ ಪ್ರಮಾಣವಚನ; ವಿದೇಶಿ ನಾಯಕರು ಸಾಕ್ಷಿ:

ಇಂದು ನಡೆಯಲಿರುವ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಪ್ರಮಾಣವಚನ ಸಮಾರಂಭಕ್ಕೆ ಹೆಚ್ಚಿನ ಭದ್ರತೆ:

ಇಂದು ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಸಮಾರಂಭಕ್ಕೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುತ್ತದೆ. ಅರೆಸೇನಾ ಪಡೆಯ 5 ತುಕಡಿಯ ಹಲವು ಸುತ್ತುಗಳ ಭದ್ರತೆ ಒದಗಿಸಲಾಗುತ್ತದೆ. ಇನ್ನು NSG ಕಮಾಂಡೊಗಳು ಹದ್ದಿನ ಕಣ್ಣಿಡಲಿವೆ. ಡ್ರೋಣ್​​ ಕಣ್ಗಾವಲು ಇಡಲಿದೆ. ಜೊತೆಗೆ ರಾಷ್ಟ್ರಪತಿ ಭವನದ ಸುತ್ತ ಸ್ಟೈಪರ್‌ಗಳನ್ನು ನಿಯೋಜಿಸಲಾಗುತ್ತದೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್‌ ದೇಶಗಳ ಪ್ರಮುಖರನ್ನು ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಜೊತೆ 30 ಮಂದಿ ಸಚಿವರು ಪ್ರಮಾಣವಚನ:

ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ರಚನೆ ಆಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಕೌಂಟ್‌ಡೌನ್ ಶುರುವಾಗಿದೆ. ಮೋದಿ ಪ್ರಮಾಣ ಬೆನ್ನಲ್ಲೇ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಸಂಪುಟ ಅಂತಿಮಕ್ಕೆ ಕಸರತ್ತು: ಯಾರಿಗೆಲ್ಲ ಚಾನ್ಸ್​​​?:

ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವವಿದೆ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಅವರು ಕೇಂದ್ರದ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಹೆಸರು ಮುಂಚೂಣಿಯಲ್ಲಿದೆ. ತೆಲುಗು ದೇಶಂ ಪಕ್ಷವು 16 ಹಾಗೂ ಜೆಡಿಯು 12 ಸ್ಥಾನಗಳಲ್ಲಿ ಗೆದ್ದು ಕಿಂಗ್ ಮೇಕರ್‌ಗಳಾಗಿ ಹೊರ ಹೊಮ್ಮಿವೆ.

ಟಿಡಿಪಿ ಹಾಗೂ ಜೆಡಿಯುಗೆ ತಲಾ ಒಂದು ಸಂಪುಟ ದರ್ಜೆ ಸೇರಿದಂತೆ ತಲಾ ಮೂರು ಖಾತೆಗಳನ್ನು ನೀಡಲು ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ. ಶಿವಸೇನೆಯು ಏಳು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಪಕ್ಷಕ್ಕೆ ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ ನೀಡುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES