Sunday, September 8, 2024

ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಲು, ಮತ ಹಾಕದವರ ಮನಗೆಲ್ಲಲು ರಾಹುಲ್ ಗಾಂಧಿ ಸಲಹೆ

ಬೆಂಗಳೂರು: ನೂತನ ಸಂಸದರು ಜನರ ಧ್ವನಿಯಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ಕಾಂಗ್ರೆಸ್ ಗೆ ಮತ ಹಾಕದವರ ಮನ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ಸಲಹೆ ನೀಡಿದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮಗಳ ಜೊಯೆ ಮಾತನಾಡಿದರು. ರಾಹುಲ್ ಗಾಂಧಿ ಅವರು ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದರು. ಲೋಕಸಭೆಗೆ ಆಯ್ಕೆಯಾದ 9 ಸಂಸದರಿಗೆ ಅಭಿನಂದನೆ ಸಲ್ಲಿಸಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು. ಬೆಂಗಳೂರು ಹಾಗೂ ದೆಹಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರ್ಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಫೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.

ಪರಾಭವಗೊಂಡ ಅಭ್ಯರ್ಥಿಗಳಿಗೂ ಧೈರ್ಯ ತುಂಬಿದ ರಾಹುಲ್ ಗಾಂಧಿ ಅವರು, ನೀವು ಸೋತರೂ ಜನರ ಮಧ್ಯೆ ಇರಬೇಕು ಹಾಗೂ ನಮಗೆ ಮತ ನೀಡದವರ ಹೃದಯ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ನಮಗೆ ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ:  ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು ಪ್ರಕರಣ: ರಾಹುಲ್​ಗೆ ರಿಲೀಫ್​

ನಂತರ ಕೆಲ ಸಚಿವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, ಸಚಿವರ ಕ್ಷೇತ್ರದಲ್ಲಿ ಚುನಾವಣೆ ಫಲಿತಾಂಶ ಏನಾಯಿತು ಎಂದು ಚರ್ಚೆ ಮಾಡಿದರು. ರಾಜ್ಯದಲ್ಲಿ ಇನ್ನು 5-6 ಸೀಟುಗಳ ನಿರೀಕ್ಷೆ ಇತ್ತು. ಎಲ್ಲರ ಮೇಲೂ ಹೊಣೆಗಾರಿಕೆ ಇರಬೇಕು. ಎಲ್ಲೆಲ್ಲಿ ಹಿನ್ನಡೆಯಾಗಿದೆ ಅಲ್ಲಿ ಸರಿಪಡಿಸಿಕೊಳ್ಳಬೇಕು. ಮತ್ತೆ ಜನರ ಬಳಿಗೆ ಹೋಗಬೇಕು ಎಂದು ಜವಾಬ್ದಾರಿ ನೀಡಿದ್ದಾರೆ.

ಇನ್ನು ಎಲ್ಲ ನಾಯಕರ ಜತೆ ಚರ್ಚೆ ಮಾಡಿ ಕಾರ್ಯಸೂಚಿ ಸಿದ್ಧಪಡಿಸುವಂತೆ ನನಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. ಇನ್ನು ಶನಿವಾರ (ಜೂನ್ 8) ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದು, ಈ ಸಭೆಯಿಂದ ಮರಳಿದ ನಂತರ ಮುಂದಿನ ವಾರ ನಮ್ಮ ನಾಯಕರ ಜತೆ ಚರ್ಚೆ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ನಮಗೆ ಶಕ್ತಿಯಾಗಿದ್ದು, ಖರ್ಗೆ ಅವರು 371ಜೆ ಮೂಲಕ ನಮಗೆ ಶಕ್ತಿ ತುಂಬಿದ್ದು ಅದರಿಂದ 5ಕ್ಕೆ 5 ಕ್ಷೇತ್ರ ಗೆದ್ದಿದ್ದೇವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕಾರ್ಯಯೋಜನೆ ರೂಪಿಸುತ್ತೇವೆ ಎಂದರು.

RELATED ARTICLES

Related Articles

TRENDING ARTICLES