Friday, May 17, 2024

ಪ್ರವಾಸಕ್ಕೆ ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು : ಸಾವಿನಲ್ಲೂ ಒಂದಾದ ದೋಸ್ತಿಗಳು

ರಾಮನಗರ : ಅವರೆಲ್ಲರೂ‌ ಒಂದೇ ಕಾಲೇಜಿನ ಸ್ನೇಹಿತರು. ಪ್ರಾಣಕ್ಕೆ ಪ್ರಾಣ ಕೊಡೋ‌ ಸ್ನೇಹಿತರು. ಇದೀಗ ಈ ಕುಚುಕು ದೋಸ್ತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

ಕಾಲೇಜಿಗೆ ರಜೆ ಇದ್ದ ಹಿನ್ನಲೆ ಕನಕಪುರ ತಾಲ್ಲೂಕಿನ ಮೇಕೆದಾಟು ಸಂಗಮದ ಕಾವೇರಿ ನದಿಗೆ ಪ್ರವಾಸಕ್ಕೆ ಬಂದಿದ್ದರು. ಈಜು ಬಾರದೇ ಇದ್ದರೂ ನದಿಗೆ ಇಳಿದ ಪರಿಣಾಮ 12 ವಿದ್ಯಾರ್ಥಿಗಳ ಪೈಕಿ ಐವರು ನೀರುಪಾಲಾಗಿದ್ದಾರೆ.

ಹರ್ಷಿತಾ (18), ತೇಜಸ್ (19), ವರ್ಷಾ (18), ಸ್ನೇಹಾ (19), ಅಭಿಶೇಕ್ (19) ಮೃತರು ದುರ್ದೈವಿಗಳು. ಎಲ್ಲರೂ ಬೆಂಗಳೂರು ಮೂಲದವರೆಂದು ತಿಳಿದುಬಂದಿದೆ. ಕಾವೇರಿ ನದಿಯಿಂದ ಅಗ್ನಿಶಾಮಕ ದಳ ಶವಗಳನ್ನ ಹೊರತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡಿದಿದೆ.

ಬೆಳ್ಳಂ ಬೆಳಗ್ಗೆ ಸಂಗಮಕ್ಕೆ ಪ್ರವಾಸಕ್ಕೆ ಬಂದಿದ್ದ ವಿಧ್ಯಾರ್ಥಿಗಳು, ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದರು. ಈ ವೇಳೆ ಐವರು ನೀರಿನಲ್ಲಿ ಮುಳುಗುತ್ತಿದ್ದಂತೆ, ಇನ್ನೂಳಿದವರು ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯರು ನೀರಿಗೆ ಧುಮುಕಿ ಪ್ರಾಣ ಉಳಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಅಷ್ಟರಲ್ಲಾಗ್ಲೇ ಐವರು ಸಾವನ್ನಪ್ಪಿದ್ದರು.

ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಿದರು. ಪೋಸ್ಟ್‌ಮಾರ್ಟಂ ಬಳಿಕ ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಗೊಳಿಸಲಾಗುತ್ತದೆ.

ಒಟ್ಟಾರೆ, ಬಾಳಿ ಬದುಕ ಬೇಕಿದ್ದ ವಿದ್ಯಾರ್ಥಿಗಳು ಕಾವೇರಿ ತಾಯಿಯ ಒಡಲಲ್ಲಿ ಮುಳುಗಿ ಸಾವನ್ನಪ್ಪಿದ್ದು ದುರಂತವೇ ಸರಿ.

RELATED ARTICLES

Related Articles

TRENDING ARTICLES