Saturday, May 4, 2024

ಕಾಂಗ್ರೆಸ್ ನಿಂದ ಯಾವುದೇ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್ ನಿಂದ ಯಾವುದೇ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರೆತಿಲ್ಲ. ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ನಗರದಲ್ಲಿ ನಡೆದ ದಲಿತ ಸಮುದಾಯದ ಮುಖಂಡರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತ ಸಮುದಾಯವನ್ನು ಮತ‌ಬ್ಯಾಂಕ್ ಅನ್ನಾಗಿ ಮಾಡಿಕೊಂಡು ಸಮುದಾಯದ ಪ್ರಮುಖ ಬೇಡಿಕೆಯಾದ ಒಳ ಮೀಸಲಾತಿ ನೀಡದೆ ರಾಜಕಾರಣ ಮಾಡುತ್ತ ಬಂದಿದ್ದಾರೆ ಎಂದರು.

ಅನೇಕ ವರ್ಷಗಳಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಬೇಡಿಕೆ ಇದ್ದರೂ ಕಾಂಗ್ರೆಸ್ ಮೀಸಲಾತಿ ಹೆಚ್ಚಳ ಮಾಡದೇ ನಿರ್ಲಕ್ಷ್ಯ ಮಾಡಿದ್ದರು. ನಮ್ಮ ಅವಧಿಯಲ್ಲಿ ಎಸ್ಸಿ ಸಮುದಾಯಕ್ಕೆ ಶೇ 15% ರಿಂದ ಶೇ 17% ಹೆಚ್ಚಳ ಮಾಡಿದ್ದೇನೆ. ಎಸ್ಟಿ ಸಮುದಾಯದ ಮೀಸಲಾತಿಯನ್ನು ಶೇ 3 % ರಿಂದ ಶೇ 7 % ಹೆಚ್ಚಳ ಮಾಡಿದ್ದೇವೆ. ನಾನೂ ಈ ಸಮುದಾಯದಲ್ಲಿ ಒಬ್ಬನಾಗಿ ಲೋಕಸಭೆಯಲ್ಲಿ ಈ ಸಮುದಾಯಕ್ಕ ನ್ಯಾಯ ಕೊಡಿಸುವ‌ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ಮಹಿಳೆಯರನ್ನು ಅವಮಾನಿಸಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಕುಮಾರಸ್ವಾಮಿ ಸ್ಪಷ್ಟನೆ

ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಮಾತನಾಡಿ, ಮಾದರ ಸಮುದಾಯಕ್ಕೆ ಒಳ ಮೀಸಲಾತಿ ನೀಡುವ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಈ ವಿಚಾರದಲ್ಲಿ ಸಾಕಷ್ಟು ಪರ ವಿರೋಧಗಳಿದ್ದವು. ಯಾವುದೇ ವಿರೋಧವನ್ನು ಲೆಕ್ಕಿಸದೇ ದಲಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಧಿಟ್ಟ ನಿರ್ಧಾರವನ್ನು ಬಸವರಾಜ ಬೊಮ್ಮಾಯಿಯವರು ತೆಗೆದುಕೊಂಡರು ಎಂದು ಹೇಳಿದರು.

ಅಷ್ಟೇ ಅಲ್ಲದೇ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡರು. ಅಲ್ಲದೇ ತಮ್ಮ ಅವಧಿಯಲ್ಲಿ ದಲಿತ ಸಮುದಾಯದ ಅಧಿಕಾರಿಗಳಿಗೆ ಉನ್ನತ ಸ್ಥಾನಗಳನ್ನು ನೀಡಿದ್ದರು. ಮಾದರ ಚನ್ನಯ್ಯ ಮಠಕ್ಕೆ ಬೆಂಗಳೂರಿನಲ್ಲಿ ಜಮೀನು ನೀಡಿ ದಲಿತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ಸಮುದಾಯ ಯಾವುದೇ ಮುಜುಗರ ಇಲ್ಲದೇ ಅವರನ್ನು ಬೆಂಬಲಿಸುವ ಮೂಲಕ ಬೊಮ್ಮಾಯಿಯವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಚಂದ್ರು ಲಮಾಣಿ ಸೇರಿದಂತೆ ಅನೇಕ ದಲಿತ ಮುಖಂಡರು ಹಾಜರಿದ್ದರು.

RELATED ARTICLES

Related Articles

TRENDING ARTICLES