Saturday, May 18, 2024

ಕೇಜ್ರಿವಾಲ್​ನ ಯಾವುದೇ ಸಾಕ್ಷಿ ಇಲ್ಲದೆ ಜೈಲಿಗೆ ಕಳುಹಿಸಿದ್ದಾರೆ : ಸಿದ್ದರಾಮಯ್ಯ

ಮೈಸೂರು : ಅರವಿಂದ್ ಕೇಜ್ರಿವಾಲ್​ ಅವರನ್ನು ಯಾವುದೇ ಸಾಕ್ಷಿ ಇಲ್ಲದೆ ಜೈಲಿಗೆ ಕಳುಹಿಸಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮೈಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಭ್ರಷ್ಟರನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ನೀವು ಬಾಂಡ್ ಮೂಲಕ ಹಣ ಪಡೆದಿದ್ದೀರಲ್ವಾ? ಈಗ ಹೇಳಿ ಯಾರನ್ನು ಜೈಲಿಗೆ ಕಳುಹಿಸಬೇಕು? ಎಂದು ಕುಟುಕಿದರು.

ಯಾವುದೇ ಸಾಕ್ಷಿ ಇಲ್ಲದೆ ದೆಹಲಿ ಸಿಎಂ ಅವರನ್ನ ಜೈಲಿಗೆ ಕಳುಹಿಸಿದ್ದೀರಿ. ಜಾರ್ಖಂಡ್ ಸಿಎಂ ಹೇಮಂತ್ ಸುರೇನ್ ಅವರನ್ನ ಜೈಲಿಗೆ ಕಳುಹಿಸಿದ್ದೀರಿ. ಇಬ್ಬರು ಸಿಎಂಗಳನ್ನ ಜೈಲಿಗೆ ಕಳುಹಿಸಿದ್ರಲ್ಲ. ಇಡಿ, ಸಿಬಿಐಗಳನ್ನ ದುರ್ಬಳಕೆ ಮಾಡಿಕೊಂಡ್ರಲ್ಲಾ. ಜನ ನಿಮಗೆ ವೋಟು ಹಾಕಬೇಕಾ..? ಎಂದು ವಾಗ್ದಾಳಿ ನಡೆಸಿದರು.

ಮೋದಿಯವರೇ ಸುಳ್ಳು ಹೇಳಿದ್ದೀನಾ?

ಬಿಜೆಪಿಯವರಿಗೆ ಪ್ರಜಾತಂತ್ರದಲ್ಲಿ ನಂಬಿಕೆ ಇಲ್ಲ. ಸರ್ವಾಧಿಕಾರದ ಮೇಲೆ ನಂಬಿಕೆ ಇಟ್ಟುಕೊಂಡಿರುವವರು ಬಿಜೆಪಿಯವರು. ಬಡವರ ಪರವಾಗಿ ಹೇಳಿದ ಯಾವುದೇ ಒಂದು ಯೋಜನೆ ಬಿಜೆಪಿ ಜಾರಿ ಮಾಡಿಲ್ಲ. 10 ವರ್ಷಗಳ ಹಿಂದೆ 15 ಲಕ್ಷ ಹಾಕ್ತಿನಿ ಅಂದ್ರು ಹಾಕಿದ್ರಾ? ನಾನು ಮನೆ ಯಜಮಾನಿಗೆ 2,000 ಕೊಡ್ತೀನಿ ಎಂದಿದ್ದೆ ಕೊಟ್ಟಿದ್ದೀವಿ. ನರೇಂದ್ರ ಮೋದಿಯವರೇ ನಾನು ಸುಳ್ಳು ಹೇಳಿದ್ದೀನಾ? ಅಚ್ಛೇ ದಿನ್ ಆಯೇಗಾ ಅಂದ್ರು, ಎಲ್ಲಾ ವಸ್ತುಗಳ ಬೆಲೆ ಕಡಿಮೆ ಆಯ್ತಾ..? ಎಂದು ಹರಿಹಾಯ್ದರು.

ಇಂಥ ಬಿಜೆಪಿಗರಿಗೆ ಮತ ಹಾಕಬೇಡಿ

ಮೋದಿಯವರು ಪ್ರಾಮಾಣಿಕ ಅಂತಾರೆ, ಅವರ ಪ್ರಕಾರ ಮಿಕ್ಕವರೆಲ್ಲ ಅಪ್ರಾಮಾಣಿಕರು. ಸಂವಿಧಾನ ಬದಲಾವಣೆ ಮಾಡ್ತೀವಿ ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿದ್ರು. ಅವರ ಮೇಲೆ ಕ್ರಮ ತಗೊಂಡ್ರಾ? ಹಿಡನ್ ಅಜೆಂಡಾ ಇಟ್ಟುಕೊಂಡು ಸಂವಿಧಾನ ಬದಲಾವಣೆ ಮಾಡಲಿಕ್ಕೆ ಮುಂದಾಗಿದ್ದಾರೆ. ಇಂತಹ ಬಿಜೆಪಿಗರಿಗೆ ಮತ ಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ ಕೊಟ್ಟರು.

RELATED ARTICLES

Related Articles

TRENDING ARTICLES