Friday, May 17, 2024

ಶೋಭಾ ಕರಂದ್ಲಾಜೆಯನ್ನ ಯಾಕೆ ಗೆಲ್ಲಿಸಬೇಕು? : ಸಿದ್ದರಾಮಯ್ಯ

ಬೆಂಗಳೂರು : ಶೋಭಾ ಭಾಷಣ ಕೇಳಿದೆ. ಮೋದಿಯವರಿಗೆ ಮತ ಕೊಡಿ, ಮೋದಿಯನ್ನ ಮತ್ತೆ ಪ್ರಧಾನಿ ಮಾಡ್ಬೇಕು ಅಂತ ಕೇಳಿದ್ರು. ನನಗೆ ಕೊಡಿ‌ ಅಂತ ಹೋಗಿ ಕೇಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು, ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆಯ್ತು. 26 ಜನ‌ ಆಯ್ಕೆ ಆದ್ರು, ರಾಜ್ಯದ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿಲ್ಲ. ಶೋಭಾ ಕರಂದ್ಲಾಜೆಯನ್ನ ಯಾಕೆ ಗೆಲ್ಲಿಸಬೇಕು? ಎಂದು ಪ್ರಶ್ನೆ ಮಾಡಿದರು.

ತೆರಿಗೆಯಲ್ಲಿ ಅನ್ಯಾಯ ಆಗಿದೆ ಎಂದು‌‌ ಪ್ರಶ್ನಿಸುವ ಶಕ್ತಿ ರಾಜೀವ್​ಗೆ ಇದೆ. 26 ಜನ ಸಂಸದರು ಮೋದಿ ಬಳಿ‌ ನಿಲ್ಲಲು ಗಡಗಡ ಅಂತ ನಡುಗುತ್ತಾರೆ. ನಿಮ್ಮ‌ ಕುಟುಂಬ, ಅಕ್ಕಪಕ್ಕದ ಮನೆಯವರಿಗೆ ಹೇಳಿ‌‌ ಕಾಂಗ್ರೆಸ್​ಗೆ ಮತ ಹಾಕಿ ಅಂತ. ಬಡವರಿಗೋಸ್ಕರ ಮೋದಿ‌ ಏನು ಮಾಡಿದ್ದಾರೆ? ಆಗ ನಾನು ಟೀಕೆ ಮಾಡೋದನ್ನೇ ಬಿಡ್ತೀನಿ. 2013 ರಲ್ಲಿ ನಿಮ್ಮ‌ಆಶೀರ್ವಾದದಿಂದ ಸಿಎಂ ಆದೆ. 2018ರವರೆಗೆ ಹಲವು‌ ಭಾಗ್ಯಗಳನ್ನ ಕೊಟ್ಟಿದ್ದೀನಿ. ಅವರು ಏನ್ರೀ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಾವೇನು ಪುಕ್ಕಟೆ ಅಕ್ಕಿ ಕೊಡಿ ಅಂದ್ವಾ?

5 ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದೀನಿ. ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. 50 ರಿಂದ 60 ಲಕ್ಷ ಮಹಿಳೆಯರು ದಿನಾಲೂ‌ ಸಂಚರಿಸುತ್ತಿದ್ದಾರೆ. ಅನ್ನಭಾಗ್ಯದಡಿ ಹೆಚ್ಚುವರಿಯಾಗಿ 5 ಕೆ.ಜಿ ಕೊಡ್ತೀವಿ ಅಂದ್ರಿ. ಈ ಹಿಂದೆ ನಾವು 7 ಕೆ.ಜಿ ಕೊಡ್ತಿದ್ವಿ. ಅದನ್ನ 5 ಕೆ.ಜಿಗೆ ಇಳಿಸಿದವರೇ ಬಿಜೆಪಿಯವರು. ಕೇಂದ್ರ ಸರ್ಕಾರ ಅಕ್ಕಿ‌‌ ಕೊಡ್ತೀನಿ‌ ಅಂದ್ರು ಕೊಡಲಿಲ್ಲ. 1 ಕೆ.ಜಿಗೆ 34 ರೂ. ಕೊಡ್ತೀನಿ ಅಂದ್ರು ಕೊಡಲಿಲ್ಲ. ನಾವೇನು ಪುಕ್ಕಟೆ ಕೇಳಿದ್ವಾ? ಎಂದು ಕುಟುಕಿದರು.

ಉಚಿತ ವಿದ್ಯುತ್ ಶೋಭಾ ಕೊಟ್ಟಿದ್ರಾ?

ಬಡವರಿಗೆ ಅಕ್ಕಿ ಕೊಡ್ತಿಲ್ಲ, ಬಡವರ ಪರ ಹೇಗೆ ಕೆಲಸ ಮಾಡ್ತಾರೆ? ಅದಕ್ಕಾಗಿಯೇ ನಾವು ಅಕ್ಕಿ ಬದಲಿಗೆ ಹಣ ಹಾಕುತ್ತಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಡಿ 1 ಕೋಟಿ 27 ಲಕ್ಷ ಮಹಿಳೆಯರಿಗೆ 2 ಸಾವಿರ ಕೊಡ್ತಾ ಇದ್ದೀವಿ. ಉಚಿತ ವಿದ್ಯುತ್ ಯಾರಾದ್ರೂ ಕೊಟ್ಟಿದ್ರಾ? ಯಡಿಯೂರಪ್ಪ, ಬೊಮ್ಮಾಯಿ, ಸದಾನಂದಗೌಡ, ಶೋಭಾ ಕೊಟ್ಟಿದ್ರಾ? ನಾವು ಕೊಟ್ಟಿದ್ದು ಅಲ್ವಾ? ಎಂದು ಸಿದ್ದರಾಮಯ್ಯ ಭಾಷಣದುದ್ದಕ್ಕೂ ಹರಿಹಾಯ್ದರು.

RELATED ARTICLES

Related Articles

TRENDING ARTICLES