Monday, May 13, 2024

ಅಶ್ವಿನಿ ಪುನೀತ್ ರಾಜ್​ಕುಮಾರ್ ನಿಂದನೆ: ಕಿಡಿಗೇಡಿಗಳಿಗೆ ಸಿಎಂ ವಾರ್ನಿಂಗ್​

ಬೆಂಗಳೂರು : ಗಜಪಡೆ ಪೇಜ್​ ನಿಂದ ದಿ.ನಟ ಪುನೀತ್​ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ನಿಂದನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಶ್ವಿನಿ ಪರ ಟ್ವೀಟ್​ ಮಾಡಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಸಿಎಂ, ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.  ಹೆಣ್ಣಿಗೆ ಸ್ವಾತಂತ್ರ್ಯವನ್ನು ನಿರಾಕರಿಸಿ ಗುಲಾಮಳನ್ನಾಗಿ ಮಾಡಿ ಮನೆಯೊಳಗೆ ಕೂರಿಸಿದ ಮನುವಾದದ ಸಂಕೋಲೆಯನ್ನು ಮಹಿಳೆಯರೇ ಕಿತ್ತುಹಾಕಿ ಸ್ವತಂತ್ರರಾಗುತ್ತಿದ್ದಾರೆ. ಸಂವಿಧಾನದತ್ತ ಸ್ವಾತಂತ್ರ್ಯದೊಂದಿಗೆ ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ.

ಇದನ್ನೂ ಓದಿ : ಕೀಳುಮಟ್ಟದ ಟ್ವೀಟ್‌: ʻದರ್ಶನ್ʼ​ ಫ್ಯಾನ್ಸ್ ವಿರುದ್ಧ ದೂರು ನೀಡಲು ಮುಂದಾದ ಅಪ್ಪು ಅಭಿಮಾನಿಗಳು!

ಪತಿಯನ್ನು ಕಳೆದುಕೊಂಡು ಹೆಣ್ಣುಮಕ್ಕಳು ಕೂಡಾ ವೈಯಕ್ತಿಕ ಬದುಕಿನ ನೋವುಗಳನ್ನು ನುಂಗಿಕೊಂಡು ಸಾಮಾಜಿಕ ಮತ್ತು ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗುತ್ತಿದ್ದಾರೆ. ಈ ಸಾಮಾಜಿಕ ಬದಲಾವಣೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹನೀಯರ ಸಮಾಜ ಸುಧಾರಣೆಯ ಕೊಡುಗೆಯೂ ಇದೆ. ಹೀಗಿದ್ದರೂ ಇತಿಹಾಸದ ಚಕ್ರವನ್ನು ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನವನ್ನು ಕೆಲವು ಕಿಡಿಗೇಡಿಗಳು ನಡೆಸುತ್ತಿದ್ದಾರೆ.

ಇತ್ತೀಚೆಗೆ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಪತಿಯನ್ನು ಕಳೆದುಕೊಂಡ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಅಪಮಾನಿಸಿ ತಮ್ಮ ವಿಕೃತಿಯನ್ನು ಮೆರೆಯುತ್ತಿರುವುದು ಖಂಡನೀಯ. ಇದು ಸಂವಿಧಾನವನ್ನು ತಿರಸ್ಕರಿಸಿ ಮನುವಾದವನ್ನು ಪುರಸ್ಕರಿಸಬೇಕೆಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಹಾಕುತ್ತಿರುವ ಕೂಗಿನ ಫಲ. ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ, ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕಠಿಣ ಸಂದೇಶವನ್ನು ಕಳಿಸಿದ್ದಾರೆ.

RELATED ARTICLES

Related Articles

TRENDING ARTICLES