Friday, May 3, 2024

ಯುವ ಚಿತ್ರ ರಿಲೀಸ್.. ಅಪ್ಪು ಫ್ಯಾನ್ಸ್ ಸಂಭ್ರಮ, ರಾಘಣ್ಣ ಭರ್ಜರಿ ಡ್ಯಾನ್ಸ್

ಬೆಂಗಳೂರು : ದೊಡ್ಮನೆಯ ಕುಡಿ, ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರ ಯುವ ರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಯುವ’ ಇಂದು ಅದ್ದೂರಿಯಾಗಿ ತೆರೆಕಂಡಿದೆ.

ಬೆಳಗ್ಗೆಯಿಂದಲೇ ರಾಜ್ಯದ 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಯುವ’ನ ಆರ್ಭಟ ಶುರುವಾಗಿದೆ. ಮುಂಜಾನೆ 7 ಗಂಟೆಗೆ ಬೆಂಗಳೂರಿನ ಜೆ.ಪಿ ನಗರದ ಸಿದ್ದೇಶ್ವರ ಥಿಯೇಟರ್​ನಲ್ಲಿ ಫ್ಯಾನ್ಸ್ ಶೋ ಆರಂಭವಾಗಿದೆ. ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಯುವ ರಾಜ್​ಕುಮಾರ್ ಜೊತೆಗೆ ಅಪ್ಪು ಕಟೌಟ್ ಕೂಡ ಸಂತೋಷ್ ಚಿತ್ರಮಂದಿರದ ಮುಂದೆ ತಲೆ ಎತ್ತಿದೆ. ಕಿರಿ ಮಗನ ಚೊಚ್ಚಲ ಚಿತ್ರ ವೀಕ್ಷಿಸಲು ಸಂತೋಷ್ ಥಿಯೇಟರ್​ಗೆ ರಾಘವೇಂದ್ರ ರಾಜ್​ಕುಮಾರ್ ಆಗಮಿಸಿದರು. ನೆರೆದಿದ್ದ ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅಪ್ಪು ಪುತ್ರಿ ವಂದಿತಾ ಕೂಡ ಆಗಮಿಸಿ ಚಿತ್ರ ವೀಕ್ಷಿಸಿದ್ದಾರೆ.

ಒಬ್ಬನೇ ಶಿವ ಚಿತ್ರದ ಹಾಡಿಗೆ ಅಭಿಮಾನಿಗಳು ಹಾಗೂ ಚಿಣ್ಣರು ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಹೊಡೆದು, ಆರತಿ ಬೆಳಗಿದ ಫ್ಯಾನ್ಸ್ ಸಂಭ್ರಮಿಸಿದರು. ಯುವ ಕಟೌಟ್ ಜೊತೆ ಅಪ್ಪು ಕಟೌಟ್​ಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದಾರೆ. ಇನ್ನೂ ಚಾಮರಾಜನಗರ ಮೂಲದ ಪರಮ ಶಿವಮೂರ್ತಿ ಎಂಬ ಅಭಿಮಾನಿಯೊಬ್ಬರು ಸೈಕಲ್​ನಲ್ಲಿ ದೊಡ್ಮನೆ ಸ್ಟಾರ್​ಗಳ ಭಾವಚಿತ್ರ ಡಿಸೈನ್ ಮಾಡಿ ಅಭಿಮಾನ ಮೆರೆದಿದ್ದಾರೆ.

ರಾಘಣ್ಣರ ಕಿರಿಯ ಪುತ್ರ ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ಇದಾಗಿದೆ. ಕಾಂತಾರ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ಸಪ್ತಮಿ ಗೌಡ ಯುವ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಕಿರಗಂದೂರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ.

RELATED ARTICLES

Related Articles

TRENDING ARTICLES