Friday, May 17, 2024

ರಾಹುಲ್-ಪೂರನ್ ಆಟ ವ್ಯರ್ಥ : ಲಕ್ನೋ ವಿರುದ್ಧ ರಾಜಸ್ಥಾನಕ್ಕೆ ರೋಚಕ ಗೆಲುವು

ಬೆಂಗಳೂರು : ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ 20 ರನ್​ಗಳ ರೋಚಕ ಗೆಲುವು ದಾಖಲಿಸಿತು.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜಾಕ್​ಪಾಟ್ ಹೊಡೆದಿದೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 193 ರನ್‌ ಗಳಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಡಿ ಕಾಕ್ 4 ರನ್​ ಗಳಿಸಿ ಔಟಾದರು. ಬಳಿಕ ಕ್ರೀಸ್​ಗೆ ಬಂದ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟಾದರು. ಆಯುಷ್ ಬದೋನಿ 1 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು.

ಬಳಿಕ ಒಂದಾದ ರಾಹುಲ್ ಹಾಗೂ ದೀಪಕ್ ಹೂಡಾ ತಂಡಕ್ಕೆ ಆಸರೆಯಾದರು. 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನೊಂದಿಗೆ 26 ರನ್​ ಗಳಿಸಿ ದೀಪಕ್ ಔಟಾದರು. ಬಳಿಕ ಜೊತೆಯಾದ ಪೂರನ್ ಹಾಗೂ ರಾಹುಲ್ ಆರ್​ಆರ್ ಬೌಲರ್​ಗಳನ್ನು ಮನಬಂದಂತೆ ಥಳಿಸಿದರು.

ಜವಾಬ್ದಾರಿಯುತವಾಗಿ ಆಟವಾಡುತ್ತಿದ್ದ ರಾಹುಲ್ 58 ರನ್ ಗಳಿಸಿ ಔಟಾದರು. ಬಳಿಕ ಬಂದ ಮಾರ್ಕಸ್ ಸ್ಟೊಯಿನಿಸ್ 3 ರನ್​ ಗಳಿಸಿ ಔಟಾದರು. ಕೊನೆಯ ಓವರ್​ನಲ್ಲಿ ಲಕ್ನೋ ಗೆಲುವಿಗೆ 27 ರನ್ ಅಗತ್ಯವಿತ್ತು. ಆದರೆ, ಕೇವಲ 6 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಲಕ್ನೋ 173 ರನ್​ ಗಳಿಸಿ, 20 ರನ್​ಗಳಿಂದ ಸೋಲು ಕಂಡಿತು.

ಪೂರನ್ ಏಕಾಂಗಿ ಹೋರಾಟ ವ್ಯರ್ಥ

ಕೊನೆ ಎಸೆತದವರೆಗೂ ಏಕಾಂಗಿಯಾಗಿ ಹೋರಾಡಿದ ಪೂರನ್ ಅಜೇಯ 64 ರನ್​ ಗಳಿಸಿದರು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ರಾಜಸ್ಥಾನ ರಾಯಲ್ಸ್ ಪರ ಬೌಲ್ಟ್​ 2, ಅಶ್ವಿನ್, ಸಂದೀಪ್ ಶರ್ಮಾ, ಚಹಲ್ ಹಾಗೂ ಬರ್ಗರ್ ತಲಾ ಒಂದು ವಿಕೆಟ್ ಪಡೆದರು.

​ನಾಯಕ ಸಂಜು ಅದ್ಭುತ ಬ್ಯಾಟಿಂಗ್

ರಾಜಸ್ಥಾನ ಪರ ನಾಯಕ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟವಾಡಿದರು. 52 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಧ್ರುವ್ ಜುರೆಲ್ ಅಜೇಯ 20, ಪರಾಗ್ 43, ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿದರು. ಲಕ್ನೋ ಪರ ನವೀನ್-ಉಲ್-ಹಕ್ 2, ರವಿ ಬಿಷ್ಣೋಯ್ ಹಾಗೂ ಮೊಹ್ಸಿನ್ ಖಾನ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES