Friday, May 17, 2024

ಕಾಲೇಜು ಶೌಚಾಲಯದಲ್ಲಿ ವಿಡಿಯೋ : ವಿದ್ಯಾರ್ಥಿನಿಯರು ವಿಡಿಯೋ ಚಿತ್ರೀಕರಿಸಿರುವುದು ಸಾಬೀತು

ಉಡುಪಿ : ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿಯರೇ ಶೌಚಾಲಯದಲ್ಲಿ ಸಹಪಾಠಿಯ ವಿಡಿಯೋ ಚಿತ್ರೀಕರಿಸಿರುವುದು ದೃಢಪಟ್ಟಿದೆ.

ಈ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ವರ್ಷದ ಹಿಂದೆ ಉಡುಪಿಯಲ್ಲಿ ನಡೆದ ಕಾಲೇಜಿನ ಶೌಚಾಲಯ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ವಿಪಕ್ಷ ಬಿಜೆಪಿ ಈ ಪ್ರಕರಣದ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆಸಿತ್ತು. ಬಳಿಕ ಸರ್ಕಾರ ತನಿಖೆಯನ್ನು  ಸಿಐಡಿಗೆ ವಹಿಸಿತ್ತು. ಇದೀಗ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ಸಾಕ್ಷ್ಯ ನಾಶಪಡಿಸಲು ವಿಡಿಯೋ ಡಿಲೀಟ್‌

ಆರೋಪಿ ವಿದ್ಯಾರ್ಥಿನಿಯರು ಗೆಳತಿಯ ವಿಡಿಯೋ ಮಾಡಲು ಹೋಗಿ ಬೇರೆ ಯುವತಿಯ ಖಾಸಗಿ ವಿಡಿಯೋ ಮಾಡಿರುವುದು, ಬಳಿಕ ಸಾಕ್ಷ್ಯ ನಾಶಮಾಡಲು ಮೊಬೈಲ್‌ನಲ್ಲಿದ್ದ ವಿಡಿಯೋ ಡಿಲೀಟ್‌ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಸಿಐಡಿ ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

2023 ಜುಲೈ 18ರಂದು ಘಟನೆ

ವಿದ್ಯಾರ್ಥಿನಿಯರು 2023ರ ಜುಲೈ 18ರಂದು ಕಾಲೇಜಿನ ಶೌಚಾಲಯದಲ್ಲಿ ಗೆಳತಿಯ ವಿಡಿಯೋ ಮಾಡಿದ್ದರು. ಆದರೆ, ಆ ವಿಡಿಯೋದಲ್ಲಿ ಗೆಳತಿಯ ಬದಲಾಗಿ ಬೇರೆ ಯುವತಿ ಇರುವುದು ಅರಿವಿಗೆ ಬಂದಿದೆ. ಕೂಡಲೇ ವಿಡಿಯೋವನ್ನು ಡಿಲೀಟ್ ಮಾಡಿ ಸಂತ್ರಸ್ತೆಗೆ ವಿಡಿಯೋ ಮಾಡಿರುವ ವಿಚಾರ ತಿಳಿಸಿ ಕ್ಷಮೆಯಾಚಿಸಿದ್ದಾರೆ. ಬಳಿಕ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಾಗಿ, ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಿದಾಗ ವಿಡಿಯೋ ಮಾಡಿರುವುದಾಗಿ ಒಪ್ಪಿಕೊಂಡು ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು.

ವಿದ್ಯಾರ್ಥಿನಿಯರ ಕೈಬರಹ ಹಾಗೂ ಕ್ಷಮಾಪಣಾ ಪತ್ರದ ಬರಹ ತಾಳೆಯಾಗುತ್ತಿದೆ ಎಂದು ಎಫ್‌ಎಸ್‌ಎಲ್‌ ವರದಿ ದೃಢೀಕರಿಸಿದೆ. ಒಟ್ಟಾರೆ ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಈಡಾಗಿದ್ದ ಈ ಪ್ರಕರಣ ಇದೀಗ ಆರೋಪ ಪಟ್ಟಿ ಸಲ್ಲಿಕೆ ಬಳಿಕ ಮತ್ತೆ ಸದ್ದು ಮಾಡಿದೆ.

RELATED ARTICLES

Related Articles

TRENDING ARTICLES