Friday, May 17, 2024

ರಾಜ್ಯದಲ್ಲಿ ಭೀಕರ ಬರಗಾಲ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ಬಿಡುಗಡೆಗೆ ಸಿಪಿಐಎಂ ಆಗ್ರಹ

ದೊಡ್ಡಬಳ್ಳಾಪುರ : ಕರ್ನಾಟಕ ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಕೂಡಲೇ ಅಗತ್ಯ ಹಣಕಾಸಿನ ನೆರವು ನೀಡಬೇಕೆಂಬ ಬೇಡಿಕೆಗಳ ಒತ್ತಾಯಿಸಿ ತಾಲೂಕಿನ ಮಧುರೆ ಹೋಬಳಿ ನಾಡಕಛೇರಿಯ ಅಧಿಕಾರಿಗಳ ಮೂಲಕ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಸಿಪಿಐಎಂ ಮುಖಂಡ ಚಂದ್ರ ತೇಜಸ್ವಿ ಮಾತನಾಡಿ, ಶತಮಾನದಲ್ಲಿಯೇ ಕಂಡರಿಯದ ಬೀಕರ ಬರಗಾಲ ಇಡೀ ಕರ್ನಾಟಕವನ್ನು ಆವರಿಸಿಕೊಂಡಿದೆ. ಒಂದು ಲಕ್ಷ ಕೋಟಿ ರೂ.ಗಳ ಮೌಲ್ಯಕ್ಕಿಂತ ಹೆಚ್ಚಿನ ಬೆಳೆ ನಷ್ಟವಾಗಿದೆ. ಕೈಯಲ್ಲಿ ಇದ್ದ ಬಂಡವಾಳವನ್ನು ಭೂಮಿಗೆ ಹಾಕಿ ಬೆಳೆ ನಷ್ಟದಿಂದ ರೈತರು ಕಂಗಲಾಗಿದ್ದಾರೆ. ಕೃಷಿ ಕೂಲಿಕಾರರು, ಬಡವರು, ರೈತರು ಕೆಲಸಗಳಿಲ್ಲದೆ ಹಸಿವಿನಿಂದ ನರಳಾಡುವಂತಾಗಿದೆ. ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಲ್ಲದೆ ತೀವ್ರತರ ಸಂಕಷ್ಟವನ್ನು ಅನುಭವಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ಬರಗಾಲದ ಅಧ್ಯಯನಕ್ಕೆಂದು ಒಕ್ಕೂಟ ಸರ್ಕಾರ ತಂಡಗಳು ರಾಜ್ಯಕ್ಕೆ ಬಂದು ಹೋಗಿ, ತಿಂಗಳುಗಟ್ಟಲೆ ಕಳೆದಿದೆ. ಬಿಸಿಲು ಏರುತ್ತಾ ಬರಗಾಲದ ಉಗ್ರ ಸ್ವರೂಪ ಮತ್ತಷ್ಟು ಅನಾವರಣಗೊಳ್ಳುತ್ತಿದೆ.

ಇದನ್ನೂ ಓದಿ: One Nation One Election: ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್

ಒಕ್ಕೂಟ ಸರ್ಕಾರ ದಿವ್ಯ ನಿರ್ಲಕ್ಷತೆಯನ್ನು ವಹಿಸಿದೆ. ಆರಂಭದಲ್ಲಿಯೇ ರಾಜ್ಯ ಸರ್ಕಾರ, ಸುಮಾರು 31,000 ಕೋಟಿ ರೂ.ಗಳಷ್ಟು ಬೆಳೆ ನಷ್ಟವಾಗಿದೆ ಎಂದು ವರದಿಯನ್ನು ನೀಡಿ ಪರಿಹಾರವನ್ನು ಕೇಳಿತ್ತು. ಆ ನಂತರ “ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ” ನಿಯಮಗಳಂತೆ ಕೂಡಲೇ 18,171  ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹ ಮಾಡಿತು. ಆದರೆ ಒಕ್ಕೂಟ ಸರ್ಕಾರ ಇದ್ಯಾವುದನ್ನು ತಲೆ ಕೆಡಿಸಿಕೊಳ್ಳದೇ ಮುಂದಿನ ಲೋಕಸಭೆಯ ಚುನಾವಣೆಗಳನ್ನು ಗೆಲ್ಲಲು ಅಡ್ಡ ದಾರಿಗಳನ್ನು ಹೆಣೆಯುವುದರಲ್ಲಿ ತೊಡಗಿದೆ ಎಂದರು.

ಇನ್ನೂ ರಾಜ್ಯದ ರೈತರು, ದಲಿತರು, ಕಾರ್ಮಿಕರು, ಮಹಿಳೆಯರು ಇತ್ಯಾದಿ ಜನವಿಭಾಗಗಳಿಂದ ಮತಗಳನ್ನು ಪಡೆದು ಆಯ್ಕೆಯಾಗಿರುವ 26 ಬಿಜೆಪಿ ಲೋಕಸಭಾ ಸದಸ್ಯರು ಬರಗಾಲದ ಬವಣೆಯ ಬಗ್ಗೆ ಬಾಯಿಯೇ ಬಿಡುತ್ತಿಲ್ಲ ಮಾತ್ರವಲ್ಲ ಕಳೆದ ಐದು ವರ್ಷದಲ್ಲಿ ಲೋಕಸಭೆಯಲ್ಲಿ ಒಂದೇ ಒಂದು ಶಬ್ದವೂ ಮಾತನಾಡದಿರುವ ರಾಜ್ಯದ ನಾಲ್ಕು ಲೋಕಸಭಾ ಸದಸ್ಯರು ಬಿಜೆಪಿಯವರೇ ಎಂಬ ವರದಿಗಳನ್ನು ಗಮನಿಸಿದರೆ ಇವರು ಎಂತಹವರೆಂದು ಅರ್ಥ ಮಾಡಿಕೊಳ್ಳಬಹುದು ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಸಿಪಿಐಎಂ ನ ಮುಖಂಡರಾದ ಪಿ.ಎ ವೆಂಕಟೇಶ್​, ಆರಾಧ್ಯ ಸೇರಿದಂತೆ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES