Monday, May 20, 2024

ಕರಟಕ ದಮನಕ ಮೂವಿ ರಿವ್ಯೂ: ಹೇಗಿದೆ ಗೊತ್ತಾ ಶಿವಣ್ಣ ಪ್ರಭುದೇವ ಜುಗಲ್ಬಂದಿ?

ಫಿಲ್ಮಿಡೆಸ್ಕ್​: ಕಟರಕ ದಮನಕ.. ಯೋಗರಾಜ್​ ಭಟ್ಟರ ನಿರ್ದೇಶನ ಜೊತೆಗೆ ಶಿವರಾಜ್​ಕುಮಾರ್ ಪ್ರಭುದೇವ ಕಾಂಬಿನೇಷನ್​​ ಕಾರಣಕ್ಕೆ ಸಿಕ್ಕಾಪಟ್ಟೆ ನಿರೀಕ್ಷೆ  ಮೂಡಿಸಿದ್ದ ಸಿನಿಮಾ. ಇನ್ನೂ ಕರಟಕ ದಮನಕ  ಚಿತ್ರದ ಹಾಡು, ಟೀಸರ್, ಟ್ರೈಲರ್ ಗಳು ಕೂಡ ಈ ನಿರೀಕ್ಷೆಯನ್ನ ಡಬಲ್ ಮಾಡಿದ್ವು. ಸೋ ದೊಡ್ಡ ನಿರೀಕ್ಷೆಯೊಂದಿಗೆ ಕರಟಕ ದಮನಕ ಶಿವರಾತ್ರಿ ಹಬ್ಬದ ದಿನವೇ ತೆರೆಗೆ ಬಂದಿದೆ. ಹಾಗಾದ್ರೆ ಈ ಬಹುನಿರೀಕ್ಷೆಯ ಸಿನಿಮಾ ಹೇಗಿದೆ ಎಂಬುದರ ಕಂಪ್ಲೀಟ್​ ರಿವ್ಯೂವ್​ ಇಲ್ಲಿದೆ.

ಚಿತ್ರ : ಕರಟಕ ದಮನಕ 

ನಿರ್ದೇಶನ : ಯೋಗರಾಜ್ ಭಟ್

ನಿರ್ಮಾಣ : ರಾಕ್​ಲೈನ್​ ವೆಂಕಟೇಶ್

ಸಂಗೀತ : ವಿ.ಹರಿಕೃಷ್ಣ

ಸಿನಿಮಾಟೋಗ್ರಫಿ : ಸಂತೋಷ್ ರೈ ಪಾತಾಜೆ

ತಾರಾಗಣ : ಡಾ.ಶಿವರಾಜ್​ಕುಮಾರ್, ಪ್ರಭುದೇವ, ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ದೊಡ್ಡಣ್ಣ, ಗೋವಿಂದೇಗೌಡ, ನಯನಾ, ಯೋಗರಾಜ್ ಭಟ್, ರಾಕ್​​​ಲೈನ್ ವೆಂಕಟೇಶ್, ರವಿಶಂಕರ್, ರಂಗಾಯಣ ರಘು ಮತ್ತು ಇತರರು..

ಕರಟಕ ದಮನಕ ಸ್ಟೋರಿಲೈನ್ : 

ಕರಟಕ ದಮನಕ ಅಂದ್ರೆ ಪಂಚತಂತ್ರ ಕಥೆಯಲ್ಲಿ ಬರುವ ಎರಡು ಕುತಂತ್ರಿ ನರಿಗಳ ಹೆಸರು. ಈ ಚಿತ್ರದ ನಾಯಕರಾದ ವೀರುಪಾಕ್ಷ ಮತ್ತು ಬಾಲರಾಜು ಕೂಡ ಅಪ್ಪಟ ನರಿಬುದ್ದಿಯ ಕುತಂತ್ರಿಗಳೇ. ನಾನಾ ಕಳ್ಳಾಟಗಳನ್ನ ಆಡಿ ಜೈಲು ಸೇರಿದ್ದ ಇವರಿಗೆ ಜೈಲರ್​ ಒಂದು ಟಾಸ್ಕ್ ಕೊಟ್ಟು ನಂದಿಕೋಲುರು ಅನ್ನೋ ಊರಿಗೆ ಕಳುಹಿಸ್ತಾನೆ. ನೀರು, ನೆಟ್​ವರ್ಕ್ ಏನೊಂದು ಸಿಗದ ಆ ಊರಿನಲ್ಲಿ ಜನರನ್ನ ಯಾಮಾರಿಸಿ ಇವರರಿಬ್ರೂ ಹೀರೋಗಳಾಗ್ತಾರೆ. ಇಬ್ಬರಿಗೂ ಚೆಂದದ ಗೆಳತಿಯರು ಕೂಡ ಸಿಕ್ತಾರೆ. ತಮ್ಮನ್ನ ನಂಬಿದ ಊರಿನ ಜನಕ್ಕೆ ಕರಟಕ ದಮನಕರು ಒಂದಿಷ್ಟು ಪ್ರಾಮೀಸ್ ಮಾಡ್ತಾರೆ. ಅತ್ತ ಜೈಲರ್​ ಕೊಟ್ಟ ಟಾಸ್ಕ್ ಇತ್ತ ಊರ ಜನರಿಗೆ ಮಾಡಿದ ಪ್ರಾಮೀಸ್ ಎರಡರ ನಡುವೆ ಈ  ಇಬ್ಬರೂ ಏನಾಗ್ತಾರೆ ಅನ್ನೋದೇ ಸಿನಿಮಾ ಕಥೆ. ಊರು-ನೀರು ಮತ್ತು ತೇರಿನ ಸುತ್ತ ಸುತ್ತುವ ಈ ಕಥೆಯಲ್ಲಿ ಉತ್ತರ ಕರ್ನಾಟಕದ ಊರಿನ ಸಮಸ್ಯೆಗಳ ಚಿತ್ರಣ ಇದೆ. ತರ್ಲೆ, ತಮಾಷೆ ಜೊತೆಗೆ ಒಂದು ಗಂಭೀರ ವಿಷಯವೂ ಇದೆ.

ಇದನ್ನೂ ಓದಿ: ಹಿಂದೂ ಸಮಾಜ ಬಾಂಬ್​ ದಾಳಿಗಳಿಗೆ ಬೆದರುವುದಿಲ್ಲ : ಪ್ರಮೋದ್​ ಮುತಾಲಿಕ್​

ಕರಟಕ ದಮನಕ ಕಲಾವಿದರ ಪರ್ಫಾರ್ಮೆನ್ಸ್

ಕರಟಕ ದಮನಕರಾಗಿ ಶಿವಣ್ಣ  ಆ್ಯಂಡ್ ಪ್ರಭುದೇವ ಲೀಲಾಜಾಲವಾಗಿ ನಟಿಸಿದ್ದಾರೆ. ಶಿವಣ್ಣ ಎಂದಿನಂತೆ ಪಾತ್ರವೇ ತಾನಾಗಿ ನಟಿಸಿದ್ದಾರೆ. ಪ್ರಭುದೇವ ಕಾಮಿಡಿ ಟೈಮಿಂಗ್ ಅಂತೂ ಸೂಪರ್. ಇಬ್ಬರ ಜೋಡಿ ಪ್ರೇಕ್ಷಕರನ್ನ ನಕ್ಕುನಗಿಸುತ್ತೆ. ಇನ್ನೂ ಹಳ್ಳಿ ಹಿರಿಯನ ಪಾತ್ರದಲ್ಲಿ ತನಿಕೆಲ್ಲ ಭರಣಿಯವರಿಗೆ ತೂಕದ ಪಾತ್ರವಿದೆ. ಪ್ರಿಯಾ ಆನಂದ್ , ನಿಶ್ವಿಕಾ ಉತ್ತರ ಕರ್ನಾಟಕದ ಪೋರಿಯರಾಗಿ ಇಷ್ಟವಾಗ್ತಾರೆ. ಗ್ರಾಮಸ್ಥರ ಪಾತ್ರಗಳಲ್ಲಿ ಪ್ರತಿಭಾವಂತ ಕಲಾವಿದರ ದಂಡೇ ಇದ್ದು ಎಲ್ಲರ ಅಭಿನಯ ಅಚ್ಚುಕಟ್ಟು. ಇನ್ನೂ ಚಿತ್ರದ ಅಚ್ಚರಿ ಅಂದ್ರೆ ಯೋಗರಾಜ್​ ಭಟ್ರು ಕುರುಡು ಕಾಲಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಿರ್ದೇಶನದ ಜೊತೆಗೆ ನಟನೆಯಲ್ಲೂ ಫುಲ್ ಸ್ಕೋರ್ ಮಾಡಿದ್ದಾರೆ.

ಕರಟಕ ದಮನಕ ಪ್ಲಸ್ ಪಾಯಿಂಟ್ಸ್

  • ಕಚಗುಳಿ ಇಡುವ ಸಂಭಾಷಣೆ
  • ಮೋಡಿ ಮಾಡುವ ಹಾಡುಗಳು
  • ಕಲಾವಿದರ ಆಯ್ಕೆ
  • ಸಂತೋಷ್ ರೈ ಪಾತಾಜೆ ಛಾಯಾಗ್ರಾಹಣ

ಕರಟಕ ದಮನಕ ಮೈನಸ್ ಪಾಯಿಂಟ್ಸ್ :

ಕರಟಕ ದಮನಕ ಸಿನಿಮಾ  ಲೀಲಾಜಾಲವಾಗಿ ನೋಡಿಸಿಕೊಂಡು ಹೋಗುತ್ತೆಯಾದ್ರೂ ಕಥೆಯಲ್ಲಿನ ತಿರುವುಗಳನ್ನ ಸುಲಭವಾಗಿ ಊಹೆ ಮಾಡಬಹುದು. ಚಿತ್ರಕಥೆಯಲ್ಲಿ ಒಂಚೂರು ಸಸ್ಪೆನ್ಸ್ ಸೇರಿಸಬಹುದಿತ್ತು. ಇನ್ನೂ ಚಿತ್ರದಲ್ಲಿನ ಕೆಲ ಗ್ರಾಫಿಕ್ಸ್ ಸನ್ನಿವೇಶಗಳು ಕೂಡ ಇನ್ನಷ್ಟು ಬೆಟರ್ ಆಗಬೇಕಿತ್ತು.

ಕರಟಕ ದಮನಕ ಚಿತ್ರಕ್ಕೆ ಪವರ್ ರೇಟಿಂಗ್ :

**** ( 5 ಕ್ಕೆ 4 ಸ್ಟಾರ್ಸ್ )

ಕರಟಕ ದಮನಕ ಫೈನಲ್ ಸ್ಟೇಟ್​​ಮೆಂಟ್ :

ಕರಟಕ ದಮನಕ ಸಿನಿಮಾ  ಹಾಸ್ಯದ ಜೊತೆ ಜೊತೆಗೆ ನೀರಿನ ಮಹತ್ವ, ನೀರನ್ನ ಉಳಿಸುವ ಇವತ್ತಿನ ದಿನಮಾನದ ಅಗತ್ಯವನ್ನ ಹೇಳುವ ಸಿನಿಮಾ. ನಗಿಸ್ತಾ ನಗಿಸ್ತಾನೆ ಒಂದು ದೊಡ್ಡ ಸಂದೇಶವನ್ನ ಕರಟಕ ದಮನಕ ಸಿನಿಮಾ ದಾಟಿಸುತ್ತೆ.  ಖಂಡಿತ ಒಂದೊಮ್ಮೆ ಕುಟುಂಬ ಸಮೇತವಾಗಿ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ ಕರಟಕ ದಮನಕ.

ಅಮೀತ್ ದೇಸಾಯಿ, ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES