Monday, May 13, 2024

ಮತ್ತೆ ನಡೆದ ದೈವ ಪವಾಡ : ಗೆಜ್ಜೆ ಸದ್ದು, ಬೆಂಕಿಯ ರೂಪದಲ್ಲಿ ದೈವ ಸಂಚಾರ

ಮಂಗಳೂರು : ದೈವ, ದೇವರ ನೆಲೆವೀಡು ಎಂದೇ ಕರೆಯಲ್ಪಡುವ ಕರಾವಳಿಯಲ್ಲಿ ಮತ್ತೊಂದು ಪವಾಡ ಕಾಣಿಸಿಕೊಂಡಿದೆ.

ದೇವರ ಬಗ್ಗೆ ನಂಬಿಕೆಯೇ ಮರೆಯಾಗುತ್ತಿರುವ ಈ ಹೊತ್ತಲ್ಲಿ ಅಗೋಚರ ಶಕ್ತಿ ದೈವ ತನ್ನ ಇರುವಿಕೆಯನ್ನು ತೋರಿಸಿಕೊಂಡಿದೆ. ನಡುರಾತ್ರಿಯಲ್ಲಿ ಗೆಜ್ಜೆ ಸದ್ದಿನೊಂದಿಗೆ ಪ್ರಖರ ಬೆಳಕಿನಲ್ಲಿ ಬರುವ ದೈವದ ಸಂಚಾರ ಇದೇ ಮೊದಲ ಬಾರಿಗೆ ಮೊಬೈಲ್​ನಲ್ಲಿ ರೆಕಾರ್ಡ್ ಆಗಿದೆ.

ಕಣ್ಣಿಗೆ ಕಾಣದ ಅಗೋಚರ ಶಕ್ತಿಯೇ ಇಲ್ಲಿ ಗೆಜ್ಜೆ ಸದ್ದಿನೊಂದಿಗೆ ಸದ್ದು ಮಾಡಿದೆ ಎನ್ನುವುದು ಆಸ್ತಿಕರ ನಂಬಿಕೆ. ಮಂಗಳೂರು ನಗರದ ಯೆಯ್ಯಾಡಿ ಕೈಗಾರಿಕಾ ಸಂಕೀರ್ಣದ ಬಳಿಯ ಲಿಯೋ ಕ್ರಾಸ್ತಾ ಕಾಂಪೌಂಡಿನಲ್ಲಿ ಇಂತಹದ್ದೊಂದು ವಿಸ್ಮಯಕಾರಿ ವಿದ್ಯಮಾನ ಕಂಡುಬಂದಿದೆ.

ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಕಳೆದ ಹಲವು ವರ್ಷಗಳಿಂದ ಆ ಪ್ರದೇಶದ ನಾಗನ ಬನಕ್ಕೆ ದೀಪ ಇಟ್ಟು ಆರಾಧನೆ ಮಾಡುತ್ತಿದ್ದರು. ಅದೇ ಸ್ಥಳದಲ್ಲಿ ಅವರಿಗೆ ಕಳೆದ ಐದಾರು ವರ್ಷಗಳಿಂದ ದೈವದ ಹೆಜ್ಜೆ ಸದ್ದು ಕೇಳಿಸಿತ್ತು. ಯಾರೋ ಗೆಜ್ಜೆ ಸದ್ದಿನೊಂದಿಗೆ ನಡೆದು ಬರುವಂತೆ, ಹಿಂಬಾಲಿಸುವಂತಹ ಅನುಭವ ಆಗಿತ್ತು.

ದೈವ ಸಂಚಾರದ ನಡೆಯೊಂದಿಗೆ, ಪ್ರಖರ ಬೆಳಕು

ಈ ಬಗ್ಗೆ ಜ್ಯೋತಿಷ್ಯದಲ್ಲಿ ಕೇಳಿದ್ರೆ ನಾಗಬನದ ಪಕ್ಕದಲ್ಲೇ ಇರುವ ರೆಂಜೆಯ ಮರದಲ್ಲಿ ರಕ್ತೇಶ್ವರಿ ದೈವದ ಸಾನಿಧ್ಯವಿರುವ ಬಗ್ಗೆ ಹೇಳಿದ್ದರು. ಜ್ಯೋತಿಷಿಯ ಸೂಚನೆಯಂತೆ ರಕ್ತೇಶ್ವರಿ ದೈವಕ್ಕೂ ದೀಪ ಇಟ್ಟು ಆರಾಧನೆ ಮಾಡತೊಡಗಿದ್ದರು. ಆದರೆ, ಅಪರಾತ್ರಿಯಲ್ಲಿ ದೈವದ ಸಂಚಾರದ ನಡೆ ಗೆಜ್ಜೆ ಸದ್ದಿನೊಂದಿಗೆ, ಪ್ರಖರ ಬೆಳಕಿನೊಂದಿಗೆ ಕಾಣಿಸುತ್ತಿರುವುದು ವಿಸ್ಮಯ.

ದೈವ ಸಂಚಾರದ ಬಗ್ಗೆ ಪರ-ವಿರೋಧ ಚರ್ಚೆ

ಅಪೂರ್ವ ವಿದ್ಯಮಾನವನ್ನು ದೀಪು ಶೆಟ್ಟಿಗಾರ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಆ ಜಾಗದಲ್ಲಿ ರೆಂಜೆಯ ಮರವನ್ನು ಬಿಟ್ಟರೆ ಬೇರೇನೂ ಇಲ್ಲದೇ ಇದ್ದರೂ, ಮಧ್ಯರಾತ್ರಿ ಕಳೆದ ಬಳಿಕ ಗೆಜ್ಜೆ ಸದ್ದು ಕೇಳಿಸುತ್ತಿರುವುದು ಭಾರಿ ಅಚ್ಚರಿಗೆ ಕಾರಣವಾಗಿದೆ. ಸ್ಥಳೀಯರು ದೈವದ ಸಂಚಾರವೆಂದೇ ನಂಬಿಕೊಂಡಿದ್ದರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ದೈವ ಸಂಚಾರದ ಬಗ್ಗೆ ಪರ-ವಿರೋಧ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ವಿಸ್ಮಯಕಾರಿ ವಿದ್ಯಮಾನ ಕಂಡುಬಂದ ಈ ಜಾಗದ ಬಗ್ಗೆ ಜನರಲ್ಲಿ ಒಂದು ರೀತಿಯ ಪುಳಕ ಮತ್ತು ಕುತಹೂಲ ಮನೆ ಮಾಡಿದ್ದಂತೂ ಸತ್ಯ.

RELATED ARTICLES

Related Articles

TRENDING ARTICLES