Monday, May 13, 2024

ನಮಗೆ ಸೀಟು ಮುಖ್ಯವಲ್ಲ, ಮೋದಿ ಪ್ರಧಾನಿ ಆಗಬೇಕು : ಹೆಚ್.ಡಿ. ರೇವಣ್ಣ

ಹಾಸನ : ನಮಗೆ ಸೀಟು ಮುಖ್ಯವಲ್ಲ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗೆ ಮೋದಿಯವರ ಕೊಡುಗೆ ಅಪಾರ ಇದೆ. ಈಗಾಗಲೇ ದೇವೇಗೌಡರೇ ಆ ಬಗ್ಗೆ ಹೇಳಿದ್ದಾರೆ. ಶಿವರಾತ್ರಿ ಕಳೆದ ಮೇಲೆ ಸೀಟು ಹಂಚಿಕೆಯಾಗಲಿದೆ. ಈಶ್ವರನ ಹಬ್ಬ ಕಳೆಯಲಿ ಎಲ್ಲಾ‌ ಹಂಚಿಕೆ ಆಗುತ್ತೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೇ ಆ ರೀತಿ ‌ಕೂಗಿದರು ತಪ್ಪು. ಆ ಘಟನೆ ಬಗ್ಗೆ ಈಗಾಗಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. FSL ವರದಿ, ತನಿಖಾ ವರದಿ ಬರಲಿ. ತನಿಖೆಯಾಗಲಿ ಆಮೇಲೆ, ನಿಜಾಂಶ ತಿಳಿಯುತ್ತದೆ ಎಂದು ಹೇಳಿದರು.

1 ರೂಪಾಯಿ ಖರ್ಚು ಮಾಡಲು ಆಗಲ್ಲ

ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಬೋರ್‌ವೇಲ್ ತೆಗೆದರು ನೀರು ಬರುತ್ತಿಲ್ಲ. ಟ್ಯಾಂಕ್ ಮೂಲಕವೂ ನೀರು ಸರಬರಾಜು ಮಾಡುತ್ತಿಲ್ಲ. ಕುಡಿಯುವ ನೀರಿಗೆ ಜಿಪಂ 25 ಲಕ್ಷ ಕೊಡ್ತಿವಿ ಅಂದಿದ್ದರು, ಇನ್ನೂ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಅಕೌಂಟ್‌ಗೆ 50 ಲಕ್ಷ ಕೊಟ್ಟಿದ್ದಾರೆ. ಎನ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ ಒಂದು ರೂಪಾಯಿ ಖರ್ಚು ಮಾಡಲು ಆಗಲ್ಲ ಎಂದು ಬೇಸರಿಸಿದರು.

ಸರ್ಕಾರ 48 ಕೋಟಿ ಬಿಡುಗಡೆ ಮಾಡಬೇಕು

ರೈತರ ಬೆಳೆ ಹಾನಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ನಮ್ಮ ಜಿಲ್ಲೆಯ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಫ್ಲೈ ಓವರ್‌ಗೆ ರಾಜ್ಯ ಸರ್ಕಾರ 48 ಕೋಟಿ ಬಿಡುಗಡೆ ಮಾಡಬೇಕು, ಅದನ್ನು ಮಾಡಿಲ್ಲ. ನಾಳೆ ಸಿಎಂ ಹಾಸನದಲ್ಲಿ 1,200 ಕೋಟಿ ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ ಮಾಡುತ್ತಿದ್ದಾರೆ. ಮಾಡಲಿ ನಮಗೆ ಸಂತೋಷ ಎಂದು ತಿಳಿಸಿದರು.

ಸಿಎಂ ನಾಲ್ಕಾರು ಕಾಸು ಕೊಟ್ಟರೆ ಒಳ್ಳೆಯದು

ಜಿಲ್ಲಾಧಿಕಾರಿಗಳು ಇವೆಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕಾರು ಕಾಸು ಕೊಟ್ಟರೆ ಒಳ್ಳೆಯದು. ರಾಜಕಾರಣ ಆಮೇಲೆ ಮಾಡೋಣ. ಈ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸಿಎಂಗೆ ಮನವರಿಕೆ ಮಾಡಿಕೊಡಲಿ ಎಂದು ಹೆಚ್.ಡಿ. ರೇವಣ್ಣ ಹೇಳಿದರು.

RELATED ARTICLES

Related Articles

TRENDING ARTICLES