Friday, May 17, 2024

ಕನ್ನಡಕ್ಕೆ ದ್ರೋಹ ಬಗೆದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ : ಆರ್. ಅಶೋಕ್

ಬೆಂಗಳೂರು : ಕನ್ನಡಕ್ಕೆ ದ್ರೋಹ ಬಗೆದರೆ, ಕನ್ನಡದ ಬಗ್ಗೆ ಅಸಡ್ಡೆ ತೋರಿದರೆ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ ಕಡ್ಡಾಯ ಮಾಡುವ ನಿಯಮ ಕೇವಲ ಕಡತಕ್ಕೆ ಸೀಮಿತವಾಗದೆ, ಪ್ರಚಾರದ ವಸ್ತುವಾಗಿದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ ಮೇಲಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು, ಉದ್ದಿಮೆಗಳು ಮತ್ತು ಕೈಗಾರಿಕೆಗಳ ನಾಮಫಲಕಗಳಲ್ಲಿ ಶೇಕಡ 60% ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕೆಂಬ ನಿಯಮ ಜಾರಿಗೊಳಿಸಲು ನೀಡಲಾಗಿದ್ದ ಗಡುವು ನಾಳೆಗೆ ಮುಕ್ತಾಯವಾಗಲಿದೆ. ಇನ್ನೂ ಅನೇಕ ಕಡೆಗಳಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವಂತೆ ಅನ್ಯಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ ಎಂದು ದೂರಿದ್ದಾರೆ.

ಕಾನೂನು ಜಾರಿಗೆ ತರಲು ಸರ್ಕಾರ ನಿರಾಸಕ್ತಿ

ಅನ್ಯ ಭಾಷೆಯ ಫಲಕಗಳನ್ನು ತೆರವುಗೊಳಿಸಲು ಕನ್ನಡ ಪರ ಹೋರಾಟಗಾರರು ಹೋರಾಟ ಮಾಡುತ್ತಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರ ಮೇಲೆ ಲಾಠಿ ಪ್ರಹಾರ ಮಾಡಿ, ಕೇಸು ಹಾಕಿ ಅವರನ್ನು ಬಂಧಿಸಿದ್ದರು. ಇದೀಗ ಸರ್ಕಾರ ಕಾನೂನು ಜಾರಿಗೆ ತರಲು ಸಂಪೂರ್ಣ ನಿರಾಸಕ್ತಿ ತೋರುತ್ತಿದೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES