Friday, May 17, 2024

3ನೇ ದಿನದಾಟ ಅಂತ್ಯ.. ಭಾರತದ ಗೆಲುವಿಗೆ ಬೇಕಿದೆ 152 ರನ್

ಬೆಂಗಳೂರು : ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯ ರೋಚಕ ಘಟಕ್ಕೆ ತಲುಪಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತವನ್ನು 307 ರನ್​ಗಳಿಗೆ ಆಲೌಟ್​ ಮಾಡಿದ ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್​ ಆರಂಭಿಸಿತು. 46 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿದ ಆಂಗ್ಲ ಪಡೆ 145 ರನ್​ಗಳಿಸಿ ಆಲೌಟ್​ ಆಯಿತು. ಈ ಮೂಲಕ ಭಾರತದ ಗೆಲುವಿಗೆ 192 ರನ್​ ಟಾರ್ಗೆಟ್ ನೀಡಿತು.

ಈ ಗುರಿ ಬೆನ್ನಟ್ಟಿರುವ ಭಾರತ 3ನೇ ದಿನದಾಟದ​ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 40 ರನ್​ ಗಳಿಸಿದೆ. ನಾಲ್ಕನೇ ದಿನವಾದ ನಾಳೆ ಭಾರತ ಗೆಲ್ಲುವ ಅವಕಾಶ ಪಡೆದಿದೆ. ನಾಯಕ ರೋಹಿತ್ ಅಜೇಯ 24 ಹಾಗೂ ಯಶಸ್ವಿ ಜೈಸ್ವಾಲ್ ಅಜೇಯ 16 ರನ್​ ಗಳಿಸಿ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಭಾರತದ ಗೆಲುವಿಗೆ ಇನ್ನೂ 152 ರನ್​ಗಳ ಅಗತ್ಯವಿದೆ. ನಾಳೆ ಪಂದ್ಯ ಗೆದ್ದರೆ 3-1 ಅಂತರದಲ್ಲಿ ಸರಣಿ ಭಾರತದ ‘ಕೈ’ವಶವಾಗಲಿದೆ.

ಅಶ್ವಿನ್, ಯಾದವ್ ಸ್ಪಿನ್ ಮೋಡಿ

ಭಾರತದ ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಆಂಗ್ಲ ಪಡೆ ಧೂಳಿಪಟವಾಯಿತು. 53.5 ಓವರ್​ಗಳಲ್ಲಿ ಕೇವಲ 145 ರನ್​​ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ರವಿಚಂದ್ರನ್ ಅಶ್ವಿನ್​ 5 ಹಾಗೂ ಕುಲದೀಪ್​ ಯಾದವ್ 4 ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ 1 ವಿಕೆಟ್ ಪಡೆದರು. ಇಂಗ್ಲೆಂಡ್​ ಪರ ಝಾಕ್ ಕ್ರಾಲಿ ಅರ್ಧಶತಕ (60) ಹಾಗೂ ಜಾನಿ ಬೈರ್ಸ್ಟೋವ್ 30 ರನ್​ ಗಳಿಸಿದರು. ಉಳಿದ ಯಾವ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಲಿಲ್ಲ.

ಭಾರತಕ್ಕೆ ಧ್ರುವ್ ಜುರೆಲ್ ಆಸರೆ

ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟರ್ ಧ್ರುವ್​ ಜುರೆಲ್ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 96 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್​ ನೆರವಿನೊಂದಿಗೆ ಟೆಸ್ಟ್​ ವೃತ್ತಿ ಜೀವನದ ಮೊದಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. 90 ರನ್​ ಗಳಿಸಿದ್ದಾಗ ಹಾರ್ಟ್ಲಿಗೆ ವಿಕೆಟ್​ ಒಪ್ಪಿಸಿ ಶತಕ ವಂಚಿತರಾದರು.

RELATED ARTICLES

Related Articles

TRENDING ARTICLES