ಬೆಳಗಾವಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅಂದ್ರೆ ಸಡಕ್ ಕೆ ಭಾಷಾ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕೊಂಡಾಡಿದರು.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸಾರಿಗೆ ಸಚಿವಾಲಯದಿಂದ ರಾಜ್ಯದ ರಸ್ತೆಗಳು ಸುಧಾರಣೆ ಆಗಬೇಕು. ಈ ರಸ್ತೆ ಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕು. ಇದರಿಂದ ಅನೇಕ ಉದ್ಯಮಿಗಳು ಬರಬೇಕೆಂದು ಕೇಂದ್ರ ಸರ್ಕಾರ ಕನಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡ್ತಾರೆ ಎಂದರು.
ನಮಗೆ ನಮ್ಮದೇ ಸರ್ಕಾರ ಎನ್ನುವ ಭಾವನೆ
ಕಳೆದ 9 ತಿಂಗಳಲ್ಲಿ 5 ಬಾರಿ ಗಡ್ಕರಿ ಅವರನ್ನ ಭೇಟಿ ಮಾಡಿರುವೆ. ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನ ಕಾರ್ಯರೂಪಕ್ಕೆ ತರಲು ಸೂಚಿಸಿದ್ದರು. ಅದರಲ್ಲಿ ಕೆಲವೊಂದಿಷ್ಟು ಕಾಮಗಾರಿ ಆರಂಭ ಮಾಡಿದ್ದೇವೆ. ನಿತಿನ್ ಗಡ್ಕರಿ ಅವರನ್ನ ನೋಡಿದ್ರೆ ಹೆಮ್ಮೆ ಆಗುತ್ತದೆ. ಕೇಂದ್ರ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಇದ್ದಾಗ ದ್ವೇಷದ ಭಾವನೆ ಇರುತ್ತದೆ. ಆದ್ರೆ, ನಿತಿನ್ ಗಡ್ಕರಿ ಅವರ ಸಚಿವಾಲಯದಲ್ಲಿ ಹಾಗಾಗಿಲ್ಲ. ಅದು ನಮಗೆ ನಮ್ಮದೇ ಸರ್ಕಾರ ಎನ್ನುವ ಭಾವನೆ ಬರುತ್ತದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಾವು ಚರ್ಚೆ
ಪಕ್ಷಕ್ಕಿಂತ ರಸ್ತೆ ಅಭಿವೃದ್ಧಿ ಕಾರ್ಯ ಮುಖ್ಯ. ಇದೇ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಿಜೆಪಿ, ಕಾಂಗ್ರೆಸ್ ಶಾಸಕರಿಗೆ ಸಮಾನ ಅನುದಾನ ನೀಡಿದ್ದೇವೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಗೋಕಾಕ ಫಾಲ್ಸ್, ಬೆಳಗಾವಿ ನಗರದ ಅಭಿವೃದ್ಧಿಗೆ ಸಹಕಾರ ಕೊಡ್ತಿವಿ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.