ಮಂಡ್ಯ : ಒಕ್ಕಲಿಗರಿಗೆ ಕಾಂಗ್ರೆಸ್ ಪಾರ್ಟಿ ಹೆಚ್ಚು ಆದ್ಯತೆ ಕೊಟ್ಟಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಒಕ್ಕಲಿಗರ ಸಭೆ ವಿಚಾರವಾಗಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸೀಟು ಗೆಲ್ಲಬೇಕು. ಅದಕ್ಕೆ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಪಕ್ಷಕ್ಕೆ ಹೆಚ್ಚು ಕೆಲಸ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ ಒಬ್ಬರೇ ಅಲ್ಲ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲಾ ಸೇರಿ ಕೆಲಸ ಮಾಡಬೇಕು. ನಾವು ಯಾರನ್ನು ವೀಕ್ ಮಾಡಲ್ಲ. ಜನರೇ ಸಂದರ್ಭ ಬಂದಾಗ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುವ ಸಲುವಾಗಿ ಕೆಲಸ ಮಾಡ್ತಿವಿ. ನಾವು ಬೇರೆಯವರನ್ನು ಹೀಯಾಳಿಸುವುದು, ವೀಕ್ ಮಾಡೋದು, ಕಂಡಮ್ ಮಾಡಲ್ಲ ಎಂದು ಹೇಳಿದರು.
ಎರಡು ಟಿಎಂಸಿ ನೀರು ಖಾಲಿಯಾಗುತ್ತೆ
ಕೃಷಿಗೆ ನೀರು ಬಿಡುಗಡೆಗೆ ರೈತರ ಬೇಡಿಕೆ ವಿಚಾರವಾಗಿ ಮಾತನಾಡಿ, ಕಳೆದ ಬೆಳೆಗೆ ನೀರು ಕೊಟ್ಟು ಬೆಳೆ ರಕ್ಷಣೆ ಮಾಡಿದ್ದೀವಿ. ಸಂಕ್ರಾಂತಿ ವೇಳೆ ಹತ್ತು ದಿನ ನೀರು ಬಿಟ್ಟಿದ್ದೇವೆ. ಕುಡಿಯುವ ನೀರಿಗೆ ಬಿಟ್ಟು ಒಂದು ಟಿಎಂಸಿ ನೀರು ಇದ್ರು, ಅದನ್ನು ರೈತರಿಗೆ ಕೊಡುವ ಮನಸ್ಥಿತಿ ನಮಗಿದೆ. ರೈತರ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ. ಸದ್ಯ ನೀರಿನ ವಿಚಾರದಲ್ಲಿ ಬಹಳ ಕೆಟ್ಟ ಪರಿಸ್ಥಿತಿ ಇದೆ. ಇನ್ನು ಮಳೆಗಾಲ ಬರೋವರೆಗೂ ಎರಡು ಟಿಎಂಸಿ ನೀರು ಖಾಲಿಯಾಗುತ್ತೆ ಅನ್ನೋ ಮಾಹಿತಿ ಇದೆ. ಆದರೂ ಸಹ ನೀರು ಬಿಡಲು ಅವಕಾಶ ಇದ್ರೆ ನೋಡೋಣ ಎಂದು ತಿಳಿಸಿದರು.