ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-2024) ವೇಳಾಪಟ್ಟಿ ಬಿಡುಗಡೆಯಾಗಿದೆ.
ಮಾರ್ಚ್ 22ರಂದು 17ನೇ ಸೀಸನ್ನ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಿಂದ ಕದನ ಆರಂಭವಾಗಲಿದೆ.
2023ರ ಆವೃತ್ತಿಯ ರನ್ನರ್ ಅಪ್ (ಫೈನಲಿಸ್ಟ್) ಗುಜರಾತ್ ಟೈಟಾನ್ಸ್ ತಂಡ ತನ್ನ ಮಾಜಿ ನಾಯಕ ಹಾರ್ದಿಕ್ ವಿರುದ್ಧ ಪಂದ್ಯ ಆಡಲಿದೆ. ಅಹಮದಾಬಾದ್‌ನಲ್ಲಿ ಮಾರ್ಚ್ 24 ರಂದು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಸೆಣಸಲಿವೆ. ಮಾರ್ಚ್ 23ರಂದು ಪಂಜಾಬ್ ಹಾಗೂ ದೆಹಲಿ, ಕೋಲ್ಕತ್ತಾ ಹಾಗೂ ಹೈದರಾಬಾದ್ ಮುಖಾಮುಖಿಯಾಗಲಿವೆ.
ಬಿಸಿಸಿಐ 2024ರ ಆವೃತ್ತಿಯ ಭಾಗಶಃ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ 17 ದಿನಗಳವರೆಗೆ (ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ) 21 ಪಂದ್ಯಗಳನ್ನು ನಡೆಯಲಿವೆ. ಈ ಅವಧಿಯಲ್ಲಿ, ನಾಲ್ಕು ಡಬಲ್ ಹೆಡರ್ ಪಂದ್ಯ ಇರುತ್ತವೆ.
ಚುನಾವಣೆ ಹಿನ್ನೆಲೆ 21 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ
ಚುನಾವಣೆ ಹಿನ್ನೆಲೆಯಲ್ಲಿ ಕೇವಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಭಾರತೀಯ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ನಂತರ ಬಿಸಿಸಿಐ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.