ತುಮಕೂರು : ಮಾಜಿ ಸಚಿವ ವಿ. ಸೋಮಣ್ಣ ತುಮಕೂರಿಗೆ ಬರ್ತಾರೆ ಅಂತ ಯಾರು ಹೇಳಿದ್ದು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು.
ತುಮಕೂರಿನಲ್ಲಿ ಬಿಜೆಪಿ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಅವರು ಮೋದಿ ಅವರು ಗುಜರಾತ್ ಬಿಟ್ಟು ವಾರಣಾಸಿಯಲ್ಲಿ ಸ್ಪರ್ಧೆ ಮಾಡಲ್ವಾ ಅಂತ ಹೇಳಿದ್ದಾರೆ. ಅದಕ್ಕೆಲ್ಲಾ ನಾವು ಉತ್ತರ ಕೊಡೋಕೆ ಆಗುತ್ತಾ..? ಟಿಕೆಟ್ ಯಾರಿಗೆ ಎಂಬ ಬಗ್ಗೆ ತೀರ್ಮಾನ ಇನ್ನೂ ಆಗಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮರಳಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿ ಸಮಾಧಾನವಾಗಿದ್ರೆ ಏನಾದರೂ ಸಾಧಿಸಬಹುದು. ನಾನು ಈ ಮಾತನ್ನೇ ಮುದ್ದಹನುಮೇಗೌಡರಿಗೆ ಹೇಳಿದ್ದೆ. ಅವರು ಆತುರ ಬಿದ್ರು, ಸ್ವಲ್ಪ ಕಾಯಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕೊನೆ ಘಳಿಗೆವರೆಗೂ ಯಾರಿಗೂ ಗೊತ್ತಗಲ್ಲ
ನನಗೆ ಗೊತ್ತಿಲ್ಲ, ಅವರು ಯಾಕೆ ಈ ರೀತಿಯ ತೀರ್ಮಾನ ತೆಗೆದುಕೊಂಡ್ರು ಅಂತ. ಅವರ ತೀರ್ಮಾನ ಆತುರದ್ದು. ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್ ತೀರ್ಮಾನ. ಅವರ ತೀರ್ಮಾನ ಕೊನೆ ಘಳಿಗೆವರೆಗೂ ಯಾರಿಗೂ ಗೊತ್ತಗಲ್ಲ. ರಾಜ್ಯಸಭೆಗೂ ಕೂಡ ಯಾರೂ ನಿರೀಕ್ಷೆ ಮಾಡದ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ರು ಎಂದು ತಿಳಿಸಿದರು.
ಸೋಮಣ್ಣ ಅವರ ಪರ ಕೆಲಸ ಮಾಡ್ತೀರಾ?
ವಿ. ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ಕೊಟ್ಟರೆ ಅವರ ಪರ ಕೆಲಸ ಮಾಡ್ತೀರಾ? ಎಂಬ ಪ್ರಶ್ನೆಗೆ, ಅದನ್ನು ಆಮೇಲೆ ಹೇಳ್ತೀನಿ ಎಂದು ಮಾಧುಸ್ವಾಮಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದರು.