ಬೆಂಗಳೂರು : ಸಿಲಿಕಾನ್ ಸಿಟಿಯ ನೀರಿನ ದಾಹ ತಣಿಸುವುದೇ ಕಾವೇರಿ ನೀರು. ಆದರೆ, ಕೆಲ ಖದೀಮರು ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡಿದ್ದರು. ಈ ಮೂಲಕ ಜಲಮಂಡಳಿಗೆ ವಂಚಿಸುತ್ತಿದ್ದರು. ಈ ಕುರಿತು ಪವರ್ ಟಿವಿ ಸುದ್ದಿ ಪ್ರಸಾರ ಮಾಡ್ತಿದ್ದಂತೆ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ.
ಬೆಂಗಳೂರಿನ ಬಹುತೇಕರು ಸಂಪೂರ್ಣವಾಗಿ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಅನಧಿಕೃತ ಕಾವೇರಿ ನೀರಿನ ಸಂಪರ್ಕ ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ಕಾವೇರಿ ನೀರು ಕಳ್ಳತನ ಎಗ್ಗಿಲ್ಲದೇ ಸಾಗುತ್ತಿತ್ತು.
ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಹೆಚ್ಚಿನ ಕಾವೇರಿ ನೀರಿನ ಸಂಪರ್ಕಗಳಿವೆ. ಆದರೆ, ಇವುಗಳಲ್ಲಿ ಅನಧಿಕೃತ ಸಂಪರ್ಕಗಳು ಹೆಚ್ಚಾಗಿದ್ದವು. ಅಪಾರ್ಟ್ಮೆಂಟ್ಗಳು, ದೊಡ್ಡ-ದೊಡ್ಡ ಉದ್ಯಮಗಳು ಜಲಮಂಡಳಿ ಕಣ್ಣಿಗೆ ಮಣ್ಣೆರಚಿ ಕಾವೇರಿ ನೀರಿನ ಅಕ್ರಮ ಕನೆಕ್ಷನ್ ಪಡೆದುಕೊಂಡಿದ್ದವು. ಈ ಕುರಿತು ನಿಮ್ಮ ಪವರ್ ಟಿವಿ ಜನವರಿ 5 ರಂದು ಸುದ್ದಿ ಪ್ರಸಾರ ಮಾಡಿತ್ತು.
200ಕ್ಕೂ ಹೆಚ್ಚು ಅನಧಿಕೃತ ನೀರಿನ ಸಂಪರ್ಕ
ಇನ್ನು ಸುದ್ದಿ ಬಿತ್ತರಿಸುತ್ತಿದ್ದಂತೆ ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕಕ್ಕೆ ಕಡಿವಾಣ ಹಾಕಲು, ಜಲ ಮಂಡಳಿ ತನಿಖಾ ತಂಡ ರಚನೆ ಮಾಡಿತ್ತು. ಫೀಲ್ಡ್ಗಿಳಿದ್ದಿದ್ದ ಜಲ ಮಂಡಳಿ ಅಧಿಕಾರಿಗಳು ನಗರದಲ್ಲಿ 200ಕ್ಕೂ ಹೆಚ್ಚು ಅನಧಿಕೃತ ಕಾವೇರಿ ನೀರಿನ ಸಂಪರ್ಕ ಹೊಂದಿರುವವರನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಇವರಿಗೆ ಪೆನಾಲ್ಟಿ ಕಟ್ಟುವಂತೆ ನೋಟಿಸ್ ನೀಡಿ, ಅನಧಿಕೃತ ನೀರಿನ ಸಂಪರ್ಕವನ್ನು ಕಟ್ ಮಾಡಲಾಗಿದೆ. ಒಂದು ವೇಳೆ ದಂಡ ಕಟ್ಟದ್ದಿದ್ದರೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರು ಕದಿಯುತ್ತಿದ್ದ ಖದೀಮರು
ಇನ್ನು ಜಲ ಮಂಡಳಿ ಅಧಿಕಾರಿಗಳ ಕಣ್ಣು ತೆರೆಸಿದ್ದ ಪವರ್ ಟಿವಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಕಾವೇರಿ ನೀರು ಕದಿಯುತ್ತಿದ್ದ ಖದೀಮರು ಸಿಕ್ಕಿ ಬಿದ್ದಿದ್ದು, ನೀರಿನ ಸಂಪರ್ಕ ಕಟ್ ಮಾಡಲಾಗಿದೆ. ಇನ್ಮುಂದೆ ಅನಧಿಕೃತ ಸಂಪರ್ಕ ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಜಲಮಂಡಳಿ ಮುಂದಾಗಿದೆ. ದಂಡ ಅಷ್ಟೇ ಅಲ್ಲ FIR ಹಾಕಿ ಜೈಲೂಟ ಫಿಕ್ಸ್ ಮಾಡಲು ಚಿಂತನೆ ನಡೆಸಿದೆ.