ಮಂಡ್ಯ : ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೆ ಬರಬೇಕಾ, ಲೋಕಸಭೆಗೆ ನಿಲ್ಲಬೇಕು ಎಂದು ನಾನು ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.
ಹಲವು ಕಡೆ ಜನರು ನನ್ನ ಸ್ಪರ್ಧೆ ಬಗ್ಗೆ ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳ್ತಾ ಇದ್ದಾರೆ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳ್ತೀನಿ ಎಂದು ಹೇಳಿದರು.
ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳ್ತೀನಿ
ನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೀನಿ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ಲೋಕಸಭೆನೇ ಬೇರೆ, ರಾಜಕೀಯವೇ ಬೇರೆ. ಇದು ನನ್ನ ಅರ್ಥ. ಸದ್ಯ ಆಲೋಚನೆಯಲ್ಲಿ ಇದ್ದೀನಿ, ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳ್ತೀನಿ ಎಂದು ಸ್ಪಷ್ಟನೆ ನೀಡಿದರು.
ನಾಳೆ ಮೈಸೂರಿಗೆ ಹೋಗ್ತಾ ಇದ್ದೀನಿ
ಆರೋಗ್ಯ ಕ್ಷೇತ್ರದಲ್ಲಿ ಮಾಡಿರೋದು ಜನ ಸೇವೆ. ರಾಷ್ಟ್ರ ಮಟ್ಟದಲ್ಲಿ ಜನಸೇವೆಗೆ ಅವಕಾಶವಿದೆ ಹೋಗಿ ಎನ್ನುತ್ತಿದ್ದಾರೆ. ಒಂದು ಜಿಲ್ಲೆಗೆ ಹೋದಾಗ ಆ ಜಿಲ್ಲೆಯವರು ಹೇಳ್ತಾರೆ. ನಾಳೆ ಮೈಸೂರಿಗೆ ಹೋಗ್ತಾ ಇದ್ದೀನಿ. ಹೋದಲೆಲ್ಲಾ ಅಲ್ಲಿ ನಿಲುತ್ತಿರಾ ಅಂತಾರೆ ಜನರು. ಈ ರಾಜಕೀಯ ಕ್ಷೇತ್ರಕ್ಕೆ ಹೋಗಬೇಕಾ? ಬೇಡವೇ? ಅನ್ನೋ ಬಗ್ಗೆ ನಿರ್ಧಾರವೇ ಮಾಡಿಲ್ಲ ಎಂದು ಡಾ.ಸಿ.ಎನ್. ಮಂಜುನಾಥ್ ವದಂತಿಗಳಿಗೆ ತೆರೆ ಎಳೆದರು.