ದಾವಣಗೆರೆ : ದಾವಣಗೆರೆಯ ರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಡಳಿತದ ವತಿಯಿಂದ ವಿವಾಹವೊಂದು ನಡೆದಿದ್ದು, ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ನಿಲಯ, ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಂತೆ ಸರಳ ವಿವಾಹ ನೆರವೇರಿತು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೇ ಮುಂದೆ ನಿಂತು ವಿವಾಹ ನೆರವೇರಿಸಿದರು. ದಿವ್ಯಾ ಎಂಬ ಯುವತಿಗೆ ಚಿತ್ರದುರ್ಗದ ನಾಗರಾಜ್ ಎಂಬಾತನ ಜೊತೆಗೆ ವಿವಾಹ ಮಾಡಿಸಲಾಯಿತು.
ಡಿಸಿ, ಎಸ್ಪಿ ನೇತೃತ್ವದಲ್ಲಿ ಸರಳ ಮದುವೆ
ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್ ಅವರೇ ಮುಂದೆ ನಿಂತು ಮದುವೆ ಮಾಡಿಸಿ, ವಧು-ವರರಿಗೆ ಶುಭ ಹಾರೈಸಿದರು. ಸರಳ ಮದುವೆ ಸಮಾರಂಭದಲ್ಲಿ ಔತಣ ಕೂಟಕ್ಕೆ ಪಾಯಸ, ಜಿಲೇಬಿ, ಪೂರಿ, ಪನ್ನಿರ್ ಮಸಾಲ, ಅನ್ನ ಸಂಬಾರ್ ಮುಂತಾದ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.
ವಧು ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್
ಮದುವೆ ನಂತರ ವಧು-ವರರಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲಾಯಿತು. ಇದು ಮಹಿಳಾ ನಿಲಯದಲ್ಲಿ ನಡೆಯುತ್ತಿರುವ 43ನೇ ವಿವಾಹವಾಗಿದ್ದು, ಮದುಮಗಳ ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್, ಇದು ಮೂರು ವರ್ಷಗಳ ನಂತರ ಇಲಾಖೆ ಬಡ್ಡಿ ಸಮೇತ ವಾಪಸ್ ನೀಡಲಿದೆ. ಈ ಹಿನ್ನಲೆ ಮಹಿಳಾ ಮತ್ತು ಮಕ್ಕಳ ನಿಲಯ ಮೆಚ್ಚುಗೆಗೆ ಪಾತ್ರವಾಗುತ್ತಿದೆ.