ಚಿಕ್ಕಮಗಳೂರು : ಕೇರಳದಲ್ಲಿ ಆನೆಯ ತುಳಿತಕ್ಕೆ ಒಳಗಾದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಿರುವುದಕ್ಕೆ ಮಾಜಿ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆ ನಡೆದಿರುವುದು ಕೇರಳದಲ್ಲಿ, ಪರಿಹಾರ ಕೊಡಬೇಕಿರುವುದು ಕೇರಳ ಸರ್ಕಾರ. ಆನೆ ಕರ್ನಾಟಕದ್ದು, ಕೇರಳದ್ದು, ತಮಿಳುನಾಡಿನದ್ದು ಅಂತ ಸೀಲ್ ಹಾಕಿದ್ದಾರಾ..? ಹೈಕಮಾಂಡ್ ಮೆಚ್ಚಿಸಲು ರಾಜಕೀಯ ಹಿತಾಸಕ್ತಿಗೆ ಕರ್ನಾಟಕದ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪರಿಹಾರ ಕೊಡಿಸುವ ಯೋಗ್ಯತೆ ಇಲ್ವಾ?
ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ‘ನನ್ನ ತೆರಿಗೆ ನನ್ನ ಹಕ್ಕು’ ಅಂದ್ರು. ನಿಮ್ಮ ರಾಜಕೀಯ ಹಿತಾಸಕ್ತಿಗೆ ಕರ್ನಾಟಕದ ಹಣವನ್ನು ಕೇರಳಕ್ಕೆ ಕೊಡಲು ನಾಚಿಕೆ ಆಗಲ್ವಾ? ಕೇರಳದಲ್ಲಿ ನಿಮ್ಮದೇ ಮೈತ್ರಿ ಕೂಟದ ಸರ್ಕಾರವಿದೆ, ಪರಿಹಾರ ಕೊಡಿಸುವ ಯೋಗ್ಯತೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ವೇಣುಗೋಪಾಲ್ದು ಏನು ನಡೆಯಲ್ವಾ?
ದೆಹಲಿಯಲ್ಲಿ ಎಲ್ಲಾ ಒಂದು ಅಂತಾರೆ. ಪರಿಹಾರ ಕೊಡಿಸುವುದಕ್ಕೆ ರಾಹುಲ್ ಗಾಂಧಿಗೆ ಆಗಲ್ವಾ? ಕರ್ನಾಟಕದಲ್ಲಿ ನಿಮ್ಮ ಕೆ.ಸಿ. ವೇಣುಗೋಪಾಲ್ದು ಏನು ನಡೆಯಲ್ವಾ? ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದ್ದಾರೆ.