ದಾವಣಗೆರೆ : ಧೈರ್ಯವಾಗಿ ಪ್ರಶ್ನಿಸು ಎಂದು ಹೇಳಿದ್ದಾರೆ, ಏನನ್ನು ಪ್ರಶ್ನಿಸಬೇಕು? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಪ್ರಶ್ನಿಸಬೇಕಾ..?ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸ್ಟೆಲ್ನಲ್ಲಿ ಸರಿಯಾಗಿ ಊಟ ಸಿಗುತ್ತಿಲ್ಲ ಎಂದು ಪ್ರಶ್ನಿಸಬೇಕಾ? ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗದೇ ಇರುವುದನ್ನು ಪ್ರಶ್ನಿಸಬೇಕಾ? ಏನನ್ನು ಪ್ರಶ್ನಿಸಬೇಕು? ಎಂದು ಕುಟುಕಿದರು.
ರಾಷ್ಟ್ರಕವಿ ಕುವೆಂಪುರವರು ಐಕ್ಯತೆಗಾಗಿ ಈ ಸಾಲುಗಳನ್ನು ಬರೆದಿದ್ದರು. ಈ ಕಾಂಗ್ರೆಸ್ನವರು ನಮ್ಮ ದೇಶದ ಸಂಸ್ಕೃತಿಯನ್ನೇ ಪ್ರಶ್ನೆ ಮಾಡಿದ್ದಾರೆ. ಇದು ಕುವೆಂಪು ಅವರಿಗೆ ಅವಮಾನ ಮಾಡಿದಂತೆ. ಈ ಪ್ರಕರಣವನ್ನು ಕಾಂಗ್ರೆಸ್ನ ಹಲವು ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವರನ್ನು ಕ್ಯಾಬಿನೆಟ್ನಿಂದ ತೆಗೆದುಹಾಕಿ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಒದ್ದಾಡಿಕೊಂಡು ಇದಕ್ಕೆ ವಿರೋಧ ಮಾಡಿದ್ದಾರೆ. ಮಧು ಬಂಗಾರಪ್ಪ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಇದು ಗೊತ್ತಿಲ್ವಾ..? ಗೊತ್ತಿಲ್ಲದೆ ಅಧಿಕಾರಿಗಳು ಮಾಡಿದರೆ ಕೂಡಲೇ ಸಚಿವರನ್ನು ಕ್ಯಾಬಿನೆಟ್ನಿಂದ ತೆಗೆದುಹಾಕಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.