ನವದೆಹಲಿ : ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿರುವ ಕಾಂಗ್ರೆಸ್ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶದ ಪ್ರಯಾಗರಾಜ್ ತಲುಪಿದೆ. ಇಂದು ತಮ್ಮ ಮಾಜಿ ಲೋಕಸಭಾ ಕ್ಷೇತ್ರವಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಸಿದ್ದಾರೆ.
ಮಣಿಪುರದಿಂದ ಆರಂಭವಾಗಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಉತ್ತರ ಪ್ರದೇಶದ ಅಮೇಥಿ ತಲುಪಿದೆ.
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಎರಡನೇ ಬಾರಿಗೆ ತಮ್ಮ ಮಾಜಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ, ರ್ಯಾಲಿ ಮೂಲಕ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದೇ ವೇಳೆ ಇಂದು ಹಾಲಿ ಸಂಸದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ರಾಹುಲ್ ಗಾಂಧಿ ಎರಡನೇ ಸಲ ಮುಖಾಮುಖಿಯಾದ ಘಟನೆ ಅಮೇಥಿಯಲ್ಲಿ ನಡೆದಿದೆ.
ಅಮೇಥಿ ಗಾಂಧಿ ಕುಟುಂಬದ ಭದ್ರಕೋಟೆ
ಒಂದು ಕಾಲದಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿ, ಈಗಲೂ ರಾಜಕೀಯದಲ್ಲಿ ಕೇಂದ್ರ ಬಿಂದುವಾಗಿ ಮುಂದುವರಿದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ನಡುವೆ ಅಮೇಥಿ ಕ್ಷೇತ್ರ ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕಾ ಸ್ಪರ್ಧೆ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಲಿ ಕೇವಲ ಒಂದು ಕ್ಷೇತ್ರ ಮಾತ್ರ ಪ್ರತಿನಿಧಿಸ್ತಿದೆ. ನ್ಯಾಯ್ ಯಾತ್ರೆ ಬಳಿಕ, ಎಸ್ಪಿ ಜೊತೆ ಸೀಟು ಹಂಚಿಕೆ ನಂತರ ಕಾಂಗ್ರಸ್ ಎರಡಂಕಿ ದಾಟಲು ಎಲ್ಲಾ ತಂತ್ರಗಾರಿಗೆ ನಡೆಸಿದೆ. ಸಹೋದರಿ ಪ್ರಿಯಾಂಕಾ ವಾದ್ರಾ, ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸ್ತಿದ್ದ ರಾಯ್ ಬರೇಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ಉತ್ತರ ಪ್ರದೇಶದ ಪೂರ್ವ ವಲಯಗಳಲ್ಲಿ ತಮ್ಮ ಛಾಪು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ ಅಂತ ಚರ್ಚಿಸಲಾಗ್ತಿದೆ.
ಇನ್ನೂ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ವೇಳೆ ನಡೆಯುತ್ತಿರುವ ನ್ಯಾಯ್ ಯಾತ್ರೆ ಉತ್ತರ ಭಾರತದಲ್ಲಿ ಕಾಂಗ್ರೆಸ್ಗೆ ಬಲ ತಂದು ಕೊಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.