ತುಮಕೂರು : ವಿದ್ಯಾರ್ಥಿಗಳು ಗೆದ್ದರೆ ನಾವೇ ಗೆದ್ದಂತೆ, ಅವರ ಸಾಧನೆಯಲ್ಲೇ ನಮ್ಮ ಸಂತೋಷ ಅಡಗಿದೆ ಎಂದು ನಿವೃತ್ತ ಶಿಕ್ಷಕಿ ವಿನೋದಮ್ಮ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾವರೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ವಿದ್ಯಾರ್ಥಿಗಳನ್ನು ಎಷ್ಟೇ ಬೈದರು ಅವರ ಉನ್ನತಿಗಾಗಿಯೇ ಹೊರತು, ಬೇರೆ ಉದ್ದೇಶದಿಂದಲ್ಲ ಎಂದು ಹೇಳಿದರು.
ಶಿಕ್ಷಕಿ ಚಂದ್ರಕಲಾ ಮಾತನಾಡಿ, ನಾವು ಅಕ್ಷರ ಕಲಿಸಿದ ವಿದ್ಯಾರ್ಥಿಗಳ ಯಶಸ್ಸನ್ನು ನಿಜವಾಗಿಯೂ ಸಂಭ್ರಮಿಸುವವರು ಶಿಕ್ಷಕರು. ವಿದ್ಯಾರ್ಥಿಗಳಿಗೆ ಕಲಿಸುವುದೇ ಶಿಕ್ಷಕರ ಕಾಯಕ. ಶಿಕ್ಷಕ ಹಾಗೂ ಶಿಷ್ಯರ ಬಂಧ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳ ಪ್ರಗತಿ ನಮಗೆ ಆನಂದ ಎಂದು ಬಣ್ಣಿಸಿದರು.
ಈ ಯಶಸ್ಸು ಗುರುಗಳಿಗೆ ಅರ್ಪಣೆ
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪತ್ರಿಕೋದ್ಯಮಿ ರವಿತೇಜ ಚಿಗಳಿಕಟ್ಟೆ ಮಾತನಾಡಿ, ನಾವು ಇಂದು ಎಷ್ಟೇ ಉನ್ನತ ಮಟ್ಟಕ್ಕೆ ಹೋದರೂ ಅದರ ಸಂಪೂರ್ಣ ಶ್ರೇಯ ಶಿಕ್ಷಕರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಕಟ್ಟುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಖ್ಯೋಪಾಧ್ಯಾಯರಾದ ಶೋಭಾ, ಸಹ ಶಿಕ್ಷಕರಾದ ವಿನೋದ ಕುಷ್ಟಗಿ, ಸಂಧ್ಯಾ, ಮಮತಾ ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.