Sunday, December 22, 2024

ಮಗಳ ನಗ್ನ ಫೋಟೋ ಅಳಿಯನಿಗೆ ಕಳಿಸುವುದಾಗಿ ತಾಯಿಗೆ ಬೆದರಿಕೆ: ಮೂವರ ಬಂಧನ

ಬೆಂಗಳೂರು: ಮಗಳ ನಗ್ನ ಫೋಟೋವನ್ನು ಅಳಿಯನಿಗೆ ಕಳಿಸುತ್ತೇನೆ ಎಂದು ಜೈಲಿನಿಂದ ರೌಡಿಶೀಟರ್ ತಾಯಿಯಿಂದ ಹಣ ಪೀಕುತ್ತಿದ್ದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೈಲಿನಲ್ಲಿದ್ದ ರೌಡಿ ಆಸಾಮಿ ಮನೋಜ್ ಅಲಿಯಾಸ್ ಕೆಂಚ ಸೇರಿದಂತೆ ಯೋಗೇಶ್, ಸುಭಾಶ್ ಎಂಬಾತನನ್ನ ಬಂಧಿಸಲಾಗಿದೆ.

ದೂರುದಾರ ಮಹಿಳೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಆರೋಪಿ ತನ್ನ ನಂಬರಿನಿಂದ ವಾಟ್ಸಾಪ್​ ಮೂಲಕ ಆಕೆಯ ವಿವಾಹಿತ ಮಗಳ ಅಶ್ಲೀಲ ಫೋಟೊ ಕಳಿಸಿದ್ದ. ತಕ್ಷಣ ದೂರುದಾರೆ ಆ ನಂಬರಿಗೆ ಕರೆ ಮಾಡಿದಾಗ ‘ನಿನ್ನ ಮಗಳ ಇಂಥಹ ಬೆತ್ತಲೆ ಫೋಟೋಗಳು ನನ್ನ ಬಳಿ ಇವೆ. ಅವುಗಳನ್ನ ನಿನ್ನ ಅಳಿಯನಿಗೆ ಕಳಿಸುತ್ತೇನೆ. ಬೇಡವಾದರೆ 40 ಸಾವಿರ ರೂ ಕೊಡಬೇಕು’ ಎಂದು ಆರೋಪಿ ಬೆದರಿಕೆ ಹಾಕಿದ್ದನು.

ಇದನ್ನೂ ಓದಿ:‘ದಂಗಲ್ ಗರ್ಲ್’ ಸುಹಾನಿ ಬಲಿ ಪಡೆದ ಆ ಅಪರೂಪದ ಕಾಯಿಲೆ ಯಾವುದು? ಇಲ್ಲಿದೆ ಮಾಹಿತಿ

ಭಯಗೊಂಡ ಮಹಿಳೆ ಆತ ಹೇಳಿದಂತೆ ಎರಡು ಖಾತೆಗಳಿಗೆ ತಲಾ 20 ಸಾವಿರದಂತೆ 40 ಸಾವಿರ ಹಣ ವರ್ಗಾಯಿಸಿದ್ದರು. ಆದರೆ ಫೆಬ್ರವರಿ 9ರಂದು ಪುನಃ ವಾಟ್ಸಾಪ್​ಗೆ ಕರೆ ಮಾಡಿದ್ದ ಕಾರ್ತಿಕ್ ಎಂಬಾತ, ‘ನಾನು ಮನು ಕಡೆಯವನು, 5 ಲಕ್ಷ ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೋಗಳನ್ನ ನಿನ್ನ ಅಳಿಯನಿಗೆ ಕಳಿಸುತ್ತೇನೆ’ ಎಂದು ಬೆದರಿಸಿದ್ದಾನೆ. ಫೆಬ್ರವರಿ 12ರಂದು ಮನು ಮತ್ತು ಆತನ ಕಡೆಯವರು ಸಾಕಷ್ಟು ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನನ್ವಯ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಆರೋಪಿಗೆ ಸಾಥ್ ನೀಡಿದ್ದ ಮಹಿಳೆಯೊಬ್ಬಳನ್ನ ಸಹ ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES