ಮಂಡ್ಯ : ಜೆಡಿಎಸ್‌ನವರು ಕಳೆದ ಬಾರಿ 39 ಮಂದಿ ಗೆದ್ದಿದ್ದರು. ಈಗ 19 ಜನ ಗೆದ್ದಿದ್ದಾರೆ, ಮುಂದೆ ಅದು ಶೂನ್ಯ ಆಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಮಂಡ್ಯದ ಮಳವಳ್ಳಿಯಲ್ಲಿ ನಡೆದ ‘ಗ್ಯಾರಂಟಿ’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್‌ಗೆ ನೀವು ವೋಟು ಹಾಕ್ತೀರಾ..? ಎಂದು ಕುಟುಕಿದರು.
ಜೆಡಿಎಸ್ ಶಾಸಕರು ಪಕ್ಷ ಬಿಡ್ತಾರೆ ಅಂತ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪಕ್ಷ, ಶಾಸಕರನ್ನು ಉಳಿಸಿಕೊಳ್ಳಲು ದೇವೇಗೌಡ ಹಾಗೂ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಆಗಿದ್ದಾರೆ. ಹಿಂದೆ ನಮ್ಮ ಜೊತೆ ಇದ್ದವರು, ಈಗ ಕೋಮುವಾದಿಗಳ ಜೊತೆ ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ
ಜೆಡಿಎಸ್, ಬಿಜೆಪಿ ಈಗ ಒಂದಾಗಿವೆ. ಮುಂದಿನ ಜನ್ಮದಲ್ಲಿ ಹುಟ್ಟಿದ್ರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಅಂತ ದೇವೇಗೌಡರು ಹೇಳಿದರು. ಮಿಸ್ಟರ್, ದೇವೇಗೌಡರೇ ನೀವೇ ನಿಮ್ಮ ಮಗನನ್ನ ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರ. ನೀವು ಜಾತ್ಯತೀತ ಅಂತ ಇಟ್ಕೊಳ್ಳೋಕೆ ನೈತಿಕತೆ ಇಲ್ಲ. ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ ಎಂದು ಛೇಡಿಸಿದರು.
ಕಳೆ ಬಾರಿ ನಾವು ಯಾಕೆ ಸೋತ್ವಿ ಗೊತ್ತಾ?
ಮುಂದಿನ ಚುನಾವಣೆಯಲ್ಲೂ ಮಂಡ್ಯ ಕಾಂಗ್ರೆಸ್ ತೆಕ್ಕೆಗೆ ಬರಲಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈ ಹಿಂದೆಯೂ ನಾವು 165ರಲ್ಲಿ 158 ಭರವಸೆ ಈಡೇರಿಸಿದೆವು. ನಾವು ಮಾಡಿದ ಕೆಲಸವನ್ನ ಜನರಿಗೆ ತಲುಪಿಸಲಿಲ್ಲ. ಹೀಗಾಗಿ, ಕಳೆದ ಸಲ ಸೋಲಬೇಕಾಯ್ತು. ನಾವು ಮಾಡದಿರೋದನ್ನ ಎಂದೂ ಹೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.