ಬೆಂಗಳೂರು: ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಭಾರಿ ಪ್ರಯತ್ನದಲ್ಲಿರುವ ಮಾಜಿ ಸಚಿವ ವಿ ಸೋಮಣ್ಣನಿಗೆ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡುವುದು ಬಹುತೇಕ ಫಿಕ್ಸ್ ಆಗಿದೆ.
ತುಮಕೂರಿನ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ಸ್ವಯಂ ನಿವೃತ್ತಿ ಪಡೆದಿರುವುದರಿಂದ ಈ ಕ್ಷೇತ್ರದ ಮೇಲೆ ವಿ.ಸೋಮಣ್ಣ, ಮಾಜಿ ಸಚಿವ ಮಾಧು ಸ್ವಾಮಿ ಸೇರಿದಂತೆ ಕೆಲವರು ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ವಿ.ಸೋಮಣ್ಣವಿಗೆ ಗ್ರೀನ್ ಸಿಗ್ನಲ್
ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡುವ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರಿಂದ ಹೈಕಮಾಂಡ್ ಅಭಿಪ್ರಾಯ ಕೇಳಿತ್ತು. ಸೋಮಣ್ಣಗೆ ಟಿಕೆಟ್ ಕೊಡುವ ಬಗ್ಗೆ ತಮ್ಮ ಅಭ್ಯಂತರ ಇಲ್ಲ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೈಕಮಾಂಡ್ ಸ್ಪರ್ಧೆಗೆ ಸಿದ್ಧರಾಗುವಂತೆ ವಿ. ಸೋಮಣ್ಣ ಅವರಿಗೆ ಪರೋಕ್ಷ ಸುಳಿವು ನೀಡಿದೆ.
ವಿ. ಸೋಮಣ್ಣ ಅವರು ಈ ಹಿಂದೆ ಗೋವಿಂದ ರಾಜ ನಗರ ಕ್ಷೇತ್ರದ ಶಾಸಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ಸೂಚನೆ ಮೇರೆಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಮತ್ತು ಚಾಮರಾಜ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ತನ್ನನ್ನು ಅತಂತ್ರಗೊಳಿಸಿದ ವಿಚಾರದಲ್ಲಿ ಅವರು ಸಿಟ್ಟಾಗಿದ್ದು, ಬಿಜೆಪಿ ಬಿಡುವ ಬಗ್ಗೆಯೇ ಮಾತನಾಡಿದ್ದರು. ಬಳಿಕ ಹೈಕಮಾಂಡ್ ಅವರನ್ನು ಸಮಾಧಾನ ಮಾಡಿತ್ತು.
ಒಂದು ಹಂತದಲ್ಲಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಸುದ್ದಿ ಹರಡಿತ್ತಾದರೂ ಅದು ನಾರಾಯಣ ಬಾಂಡಗೆ ಅವರಿಗೆ ಒಲಿದ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಮತ್ತೆ ನಿರಾಸೆ ಅನುಭವಿಸಿದರು. ಇದೀಗ ಅವರು ಬಯಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ವಿ.ಸೋಮಣ್ಣ ಮುಂದಿನ ಮೂರು ತಿಂಗಳು ತುಮಕೂರಿನಲ್ಲೇ ವಾಸ್ತವ್ಯ ಮಾಡುವ ಸಾಧ್ಯತೆ ಇದೆ.