Thursday, December 19, 2024

ಪೋಷಕರಿಗೆ ಹೇಳದೆ ಬಾಲಕಿಗೆ ಬಾಲ್ಯ ವಿವಾಹ ಮಾಡಿದ ದೊಡ್ಡಪ್ಪ 

ಆನೇಕಲ್:  ಬಾಲ್ಯ ವಿವಾಹ ಪ್ರಕರಣ ಸರ್ಜಾಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು, 24 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ಹೇಳದೆ ದೊಡ್ಡಪ್ಪ ಮದುವೆ ಮಾಡಿಸಿದ್ದಾನೆ.

ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ದೊಡ್ಡಪ್ಪ ದೊಡ್ಡಮ್ಮ ಪುಸಲಾಯಿಸಿಕೊಂಡು 24 ವರ್ಷದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಪ್ರಕರಣ ಸಂಬಂಧ ಬಾಲಕಿಯ ತಾಯಿ ಬಾಲಕಿಯ ದೊಡ್ಡಪ್ಪ, ದೊಡ್ಡಮ್ಮ ಹಾಗೂ ಇತರರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನ ಮಗಳನ್ನು ಪುಸಲಾಯಿಸಿ ಫೆಬ್ರವರಿ 15 ರಂದು ಮದುವೆ ಮಾಡಿಸಲಾಗಿದೆ. ಮಗಳು ಇನ್ನೂ ಅಪ್ರಾಪ್ತಳಾಗಿದ್ದಾಳೆ. ಕೈವಾರದಲಿನ ಯಲಮ್ಮ ದೇವಾಲಯದಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ ಜೊತೆ ಮದುವೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಮದುವೆಗೆ ವಿನೋದ್ ಕುಮಾರ್ ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ವಿನೋದ್ ಕುಮಾರ್, ಅಣ್ಣ ವಿಜಯ್ ಕುಮಾರ್ ಮತ್ತು ವೆಂಕಟಮ್ಮರವರು ಸೇರಿಕೊಂಡು ಈ ಮದುವೆ ಮಾಡಿದ್ದಾರೆ. ನನ್ನ ಮಗಳು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಬಲತ್ಕಾರದ ಮದುವೆ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಮದುವೆ ಮಾಡಿಸಿದ ಹಿನ್ನೆಲೆ ತಪ್ಪತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಜನವರಿ ತಿಂಗಳಲ್ಲಿ, ಬೆಂಗಳೂರು ನಗರದ ಆರ್.ಆರ್.ನಗರದ ದೇಗುಲದಲ್ಲಿ 16 ವರ್ಷದ ಬಾಲಕಿಗೆ 27 ವರ್ಷದ ಯುವಕನ ಜೊತೆ ಆಕೆಯ ತಾಯಿಯೇ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದ ಪ್ರಕರಣ ನಡೆದಿತ್ತು. ಮಗಳಿಗೆ ಮದುವೆ ಇಷ್ಟವಿಲ್ಲದಿದ್ದರೂ ತಾಯಿಯೇ ಬಲವಂತವಾಗಿ ವಿವಾಹ ಮಾಡಿಸಿದ್ದು, ಬಳಿಕ ಬಲವಂತವಾಗಿ ದೈಹಿಕ‌ ಸಂಪರ್ಕವಾಗಿದೆ ಎಂದು ಅಪ್ರಾಪ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಳು. ಪ್ರಕರಣವೂ ದಾಖಲಾಗಿತ್ತು.

 

RELATED ARTICLES

Related Articles

TRENDING ARTICLES