ಬೆಂಗಳೂರು: ಸಿಎಂ ಮಂಡನೆ ಮಾಡಿರುವ ಬಜೆಟ್ ರೈತ ವಿರೋಧಿ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ. ದೆಹಲಿಯಲ್ಲಿ ಮೊನ್ನೆ ರಾಜ್ಯದ ಮರ್ಯಾದೆ ಹರಾಜು ಹಾಕಿದ್ದರು. ಈ ಬಜೆಟ್ ಸಹಾ ಹಾಗೆ ಇದೆ. ಅಭಿವೃದ್ಧಿ ವಿರೋಧಿ ಶೂನ್ಯ ಬಜೆಟ್ ಇದಾಗಿದೆ. ರಾಜ್ಯದ ಅಭಿವೃದ್ಧಿಯನ್ನು 15 ರಿಂದ 20 ವರ್ಷಗಳ ಹಿಂದೆ ತೆಗೆದುಕೊಂಡು ಹೋಗಿರುವ ಬಜೆಟ್ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಜೆಟ್‍ನಲ್ಲಿ ನೇಕಾರರ ಬಗ್ಗೆ ಉಲ್ಲೇಖವಿಲ್ಲ, ಉತ್ತರ ಕರ್ನಾಟಕವನ್ನು ಮರೆತಿದ್ದಾರೆ. ನೀರಾವರಿಗೆ ಯಾವುದೇ ಯೋಜನೆಯಿಲ್ಲ. ಬರಗಾಲದಲ್ಲಿ ರೈತರ ಪರ ನಿಲ್ಲದೇ ರೈತ ವಿರೋಧಿಗಳಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿಲ್ಲ. ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಯಾರಿಗೂ ಸರಿಯಾಗಿ ತಲುಪುತ್ತಿಲ್ಲ. ಸರಿಯಾಗಿ ಅನುಷ್ಠಾನ ಮಾಡದೇ ಕೇವಲ ಹೇಳಿಕೆಗಳಷ್ಟೇ ನೀಡುತ್ತಿದ್ದಾರೆ. ರಾಜ್ಯದ ಜನರ ತಲೆ ಮೇಲೆ ಸಾಲ ಹೊರಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.