ಬೆಂಗಳೂರು : ರಾಜ್ಯದ ಜನರಿಗೆ ಮೋಸ ಮಾಡುವುದಿರಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಕುಟುಕಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಡಿ.ಕೆ. ಶಿವಕುಮಾರ್ ಅವರು ನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆಗೆ ಯಾವುದೇ ಅನುದಾನ ನೀಡದೇ ಅನ್ಯಾಯ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದ್ದೆ ಸಾಧನೆ. ಈ ಯೋಜನೆಯನ್ನು ಆರಂಭಿಸುವ ಯಾವ ಗ್ಯಾರಂಟಿಯೂ ಈ ಬಜೆಟ್ನಲ್ಲಿ ಇಲ್ಲ ಎಂದು ಚಾಟಿ ಬೀಸಿದ್ದಾರೆ.
ಕೃಷ್ಣ ಕೊಳ್ಳದ ಯೋಜನೆಗಳಿಗೆ, ಮಹದಾಯಿ ಯೋಜನೆ ಹಾಗೂ ನವಿಲೆ ಜಲಾಶಯ ಯೋಜನೆಗೆ ಅನುದಾನ ಮೀಸಲಿಟ್ಟಿಲ್ಲ. ಇದರಿಂದ ರೈತರಿಗೆ ಹಾಗೂ ಹಿಂದುಳಿದ ಭಾಗಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರುಣಾ ಕ್ಷೇತ್ರಕ್ಕೆ 2,000 ಕೋಟಿ ಕೊಟ್ಟಿದ್ದಾರೆ
ಸಿಎಂ ಸಿದ್ದರಾಮಯ್ಯ ತಮ್ಮ ವರುಣಾ ಕ್ಷೇತ್ರಕ್ಕೆ 2,000 ಕೋಟಿಗಳನ್ನು ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ. ಆದರೆ, ರಾಜ್ಯದ ಬೇರೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೇ ತಾರತಮ್ಯ ಮೆರೆದಿದ್ದಾರೆ. ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ 7ನೇ ವೇತನ ಆಯೋಗ ಅನುಷ್ಠಾನಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟವಾದ ಘೋಷಣೆ ಇಲ್ಲ. ಇದರಿಂದ ಖಜಾನೆ ಖಾಲಿಯಾಗಿರುವುದು ಕಂಡುಬರುತ್ತದೆ ಎಂದು ಛೇಡಿಸಿದ್ದಾರೆ.
ಗೊತ್ತುಗುರಿ ಇಲ್ಲದ, ಅತ್ಯಂತ ಕಳಪೆ ಬಜೆಟ್
ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಗೊತ್ತುಗುರಿ ಇಲ್ಲದ, ರಾಜ್ಯದ ಅಭಿವೃದ್ಧಿಗೆ ಮಾರಕವಾದ ಹಾಗೂ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್ ಎಂದು ಬಿ.ಎಸ್. ಯಡಿಯೂರಪ್ಪ ವಾಗ್ದಳಿ ನಡೆಸಿದ್ದಾರೆ.