ಬೆಂಗಳೂರು : ನಾನು ನನ್ನ ಜೀವಮಾನದಲ್ಲಿಯೇ ಇಂತಹ ಕಳಪೆ ಬಜೆಟ್ ಅನ್ನು ನೋಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ. ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 14 ಬಜೆಟ್ಗಳನ್ನು ಮಂಡಿಸಿರುವ ಸಿಎಂ ಸಿದ್ದರಾಮಯ್ಯನವರಿಂದ ಇಂತಹ ಕಳಪೆ ಬಜೆಟ್ (15ನೇ ಬಜೆಟ್) ನಿರೀಕ್ಷಿಸಿರಲಿಲ್ಲ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಬಜೆಟ್ ಎಲ್ಲಾ ದೃಷ್ಠಿಕೋನದಲ್ಲಿಯೂ ಕಳಪಡಯಾಗಿದೆ. ಬಹುತೇಕ ಅಂಶಗಳನ್ನು ಕೇಮದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆಯೇ ಹೊರತು ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂಬುವುದನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಚಾಟಿ ಬೀಸಿದ್ದಾರೆ.
ರಾಜ್ಯದ ಜನರಿಗೆ ಮಹಾ ಮೋಸ
ಈ ಬಜೆಟ್ ರಾಜ್ಯದ ಜನರಿಗೆ ಮಾಡಿದ ಮಹಾ ಮೋಸ. ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ. ಕೇವಲ ಘೋಷಣೆಗಳನ್ನಷ್ಟೇ ಮಾಡಲಾಗಿದೆ. ಇದರಿಂದ ಬೆಂಗಳೂರಿನ ಯಾವ ಸಮಸ್ಯೆಗಳಿಗೂ ಮುಕ್ತಿ ಸಿಗುವುದಿಲ್ಲ. ಪರಿಣಾಮ ಬೆಂಗಳೂರಿಗೆ ಹರಿದು ಬರುವ ಬಂಡವಾಳ ಹೂಡಿಕೆ ಕಡಿಮೆಯಾಗಲಿದೆ ಮತ್ತು ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಛೇಡಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ
ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಮುಂದುವರಿದ ಭಾಗವಾಗಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಕೇಂದ್ರ ಸರ್ಕಾರವನ್ನು ದೂರಲು ಈ ಬಜೆಟ್ ಮಂಡಿಸಿದಂತಿದೆ. ಈ ಬಜೆಟ್ ಗೊತ್ತುಗುರಿಯಿಲ್ಲದ, ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಮೂದಲಿಸಿದ್ದಾರೆ.