Wednesday, January 22, 2025

ಅಬುಧಾಬಿ ಹಿಂದೂ ದೇವಾಲಯ ಲೋಕಾರ್ಪಣೆಯಲ್ಲಿ ಸಂಸದೆ ಸುಮಲತಾ ಭಾಗಿ

ಬೆಂಗಳೂರು: ಅರಬ್ಬರ ನೆಲದಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಪಾಲ್ಗೊಂಡಿದ್ದರು. ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಬೋಚಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಹಿಂದೂ ದೇವಾಲಯವನ್ನು ನಿರ್ಮಾಣ ಮಾಡಿದೆ.

ದೇವಾಲಯ ಉದ್ಘಾಟನೆಗೂ ಮುನ್ನ ಮಂದಿರದ ಹೊರಗಡೆ ಕಲ್ಯಾಣಿಗೆ ಗಂಗಾ ಪೂಜೆ ಕಾರ್ಯವನ್ನು ಮೋದಿ ನೆರವೇರಿಸಿದರು. ನಂತರ ಪ್ರವೇಶದ್ವಾರದಲ್ಲಿ ಟೇಪ್‌ ಕತ್ತರಿಸುವ ಮೂಲಕ ದೇವಾಲಯವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸುಮಲತಾ ಅಂಬರೀಶ್ ಅವರು ಆ ಕ್ಷಣವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಸಂಕೇತವಾಗಿರುವ ಅಬುಧಾಬಿಯ ಬೋಚಸನ್​ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯು (BAPS) ನಿರ್ಮಿಸಿರುವ ಬೃಹತ್​ ಹಿಂದೂ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಲು ಅವಕಾಶ ಸಿಕ್ಕಿದ್ದು ಅತ್ಯಂತ ಹೆಮ್ಮೆ ಮತ್ತು ಭಗವಂತನ ಆಶೀರ್ವಾದವಾಗಿದೆ.

ವಸುದೈವ ಕುಟುಂಬಕಂ ಸಿದ್ಧಾಂತವನ್ನು ಯಾವಾಗಲೂ ಪ್ರತಿಪಾದಿಸುವ, ಜಗತ್ತೇ ಮೆಚ್ಚುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಂದಿರ ಉದ್ಘಾಟಿಸಿ, ಅಬುಧಾಬಿಯಲ್ಲಿ ಆಡಿದ ಸ್ಪೂರ್ತಿದಾಯಕ ಮಾತುಗಳು ಯುಎಇ ಮತ್ತು ಭಾರತದ ನಡುವಿನ ಬಾಂಧವ್ಯಕ್ಕೆ ಮತ್ತಷ್ಟು ಬಲ ತರುವುದರಲ್ಲಿ ಎರಡು ಮಾತಿಲ್ಲ.ಇಂತಹ ಪ್ರಧಾನಿ ಪಡೆದಿರುವುದು ನಮ್ಮೆಲ್ಲರ ಪುಣ್ಯ.

ಅಬುಧಾಬಿಯ ನೆಲದಲ್ಲಿ ಬೃಹತ್ ಹಿಂದೂ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಯಂತಹ ಐತಿಹಾಸಿಕ ಕ್ಷಣಕ್ಕೆ ಹಾಗೂ ಆ ದೈವಿಕ ಅನುಭವಕ್ಕೆ ಸಾಕ್ಷಿಯಾಗಲು ನನಗೆ ಅವಕಾಶ ಮಾಡಿಕೊಟ್ಟ BAPS ಸಂಸ್ಥೆಯ ಸರ್ವರಿಗೂ ಮನತುಂಬಿದ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES