Sunday, February 2, 2025

ಚುನಾವಣಾ ಬಾಂಡ್​ಗಳು ಸಂವಿಧಾನಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್​ ಆದೇಶ

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆಯ ಕುರಿತು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಯೋಜನೆಯು ಸಂವಿಧಾನ ಬಾಹಿರವಾಗಿದೆ. ಅನುಚ್ಛೇದ 19 ಕಲಂ 1 (ಎ) ಅನ್ನು ಇದು ಉಲ್ಲಂಘಿಸುತ್ತದೆ. ಹೀಗಾಗಿ ಬಾಂಡ್​ಗಳನ್ನು ರದ್ದು ಮಾಡಬೇಕು ಎಂದು ಆದೇಶಿಸಿದೆ.

ಚುನಾವಣಾ ಬಾಂಡ್​ ಎಂದರೇನು? 

ಇದು ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮ. 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಬಹುದು. ಈ ಬಾಂಡ್​ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಇರುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗ ಇರುವುದಿಲ್ಲ.

ಯೋಜನೆಯಲ್ಲಿರುವುದು ಏನೇನು?

  • ಅನಾಮಧೇಯ ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು.
  • ದೇಣಿಗೆ ನೀಡುವವರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ
  • ದೇಣಿಗೆ ನೀಡುವವರಿಗೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ
  • 1 ಸಾವಿರ, 10 ಸಾವಿರ, ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂ.ವರೆಗೆ ಚುನಾವಣೆ ಬಾಂಡ್‌ ಖರೀದಿಸಿ ದೇಣಿಗೆ ನೀಡಬಹುದು.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?

  • ಚುನಾವಣಾ ಬಾಂಡ್‌ ಯೋಜನೆಯು ಅಸಾಂವಿಧಾನಿಕವಾಗಿದೆ
  • ಯೋಜನೆಯಿಂದ ಜನರಿಗೆ ನೀಡಿದ ಮಾಹಿತಿ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ
  • ಕಂಪನಿಗಳ ಕಾಯ್ದೆಯನ್ನು ರದ್ದುಗೊಳಿಸಿದ್ದು ಕೂಡ ಅಸಾಂವಿಧಾನಿಕ
  • ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್‌ ಮೊತ್ತವನ್ನು ಬಹಿರಂಗಪಡಿಸಬೇಕು
  • ಬಾಂಡ್‌ ನೀಡಿದವರು ಕೇಳಿದರೆ ರಾಜಕೀಯ ಪಕ್ಷಗಳು ಅವರಿಗೆ ಬಾಂಡ್‌ ಮೊತ್ತವನ್ನು ಹಿಂತಿರುಗಿಸಬೇಕು
  • ಕೊಡು-ಕೊಳ್ಳುವ ವ್ಯವಹಾರಕ್ಕೆ ಚುನಾವಣೆ ಬಾಂಡ್‌ ಯೋಜನೆ ದಾರಿಯಾಗುತ್ತದೆ
  • ಚುನಾವಣಾ ಬಾಂಡ್‌ ಯೋಜನೆಯ ಉದ್ದೇಶವು ಕಪ್ಪು ಹಣವನ್ನು ನಿರ್ಬಂಧಿಸುವುದಾಗಿಲ್ಲ
  • ಮೂರು ವಾರದಲ್ಲಿ ಚುನಾವಣಾ ಆಯೋಗವು ಎಸ್‌ಬಿಐನಿಂದ ಬಾಂಡ್‌ ಸಂಗ್ರಹ ಕುರಿತು ಮಾಹಿತಿ ಸಂಗ್ರಹಿಸಬೇಕು
  • 2024ರ ಮಾರ್ಚ್‌ 31ರೊಳಗೆ ಚುನಾವಣಾ ಆಯೋಗವು ಎಸ್‌ಬಿಐ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು

ಯೋಜನೆ ಜಾರಿಯಾಗಿದ್ದು ಯಾವಾಗ?

ಚುನಾವಣಾ ಬಾಂಡ್‌ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಯಿತು. ಆ ಮೂಲಕ ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಲಾಯಿತು.

RELATED ARTICLES

Related Articles

TRENDING ARTICLES