Sunday, December 22, 2024

ಏಪ್ರಿಲ್ 1ರಿಂದ ಅರ್ಹ ಫಲಾನುಭವಿಗಳಿಗೆ ಹೊಸ ಕಾರ್ಡ್‌ ವಿತರಣೆ: ಸಚಿವ ಕೆ.ಎಚ್​​ ಮುನಿಯಪ್ಪ

ಬೆಂಗಳೂರು: ಹೊಸದಾಗಿ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ 31ರೊಳಗೆ ಪರಿಶೀಲಿಸಿ ಏಪ್ರಿಲ್ 1 ರಿಂದ ಅರ್ಹ ಫಲಾನುಭವಿಗಳಿಗೆ ಹೊಸ ಕಾರ್ಡ್‌ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆ “ಬಿಪಿಎಲ್ ಕಾರ್ಡ್​ ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ಸಮಸ್ಯೆಯಾಗುತ್ತಿದೆ. ಹಲವರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿಲ್ಲ. ಇದರಿಂದ ಐದು ಕೆಜಿಯ ಅಕ್ಕಿಯ ಹಣ ಹಲವು ಫಲಾನುಭವಿಗಳಿಗೆ ಕೆಲವು ತಿಂಗಳಿಂದ ತಲುಪುತ್ತಿಲ್ಲ. ಈ ಹಣ ಇಂತಹ ಫಲಾನುಭವಿಗಳಿಗೆ ಕೊಡುತ್ತಿದ್ದೀರಾ? ಇಲ್ವಾ?” ಎಂದು ಶಾಸಕಿ ನಯನ ಮೋಟಮ್ಮ ಪ್ರಶ್ನಿಸಿದರು.

“ಬಿಪಿಎಲ್ ಕಾರ್ಡ್ ಕೊಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಸರ್ವರ್ ಡೌನ್ ಅದೂ ಇದೂ ಸಮಸ್ಯೆ ಅಂತ ಹೇಳುತ್ತಿದ್ದೀರಿ. ಐದು ಗ್ಯಾರಂಟಿಗಳಿಗೆ ಜನರ ಸಂಖ್ಯೆ ಹೆಚ್ಚಾಗಬಾರದು ಅಂತ ಬಿಪಿಎಲ್ ಕಾರ್ಡ್ ಕೊಡುತ್ತಿಲ್ವಾ? ಇದುವರೆಗೂ ಎಷ್ಟು ಬಿಪಿಎಲ್ ಕೊಟ್ಟಿದ್ದೀರಿ ತಿಳಿಸಿ” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕೂಡ  ಆಗ್ರಹಿಸಿದರು.

ಇವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ವಿಧಾಸಭೆ ಚುನಾವಣೆ ಬಂತು ಅಂತ ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್​ಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿದೆ. ಆದರೆ ನಾವು ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ ವಿತರಿಸಿದ್ದೇವೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ. ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೇವೆ. ಮುಂದಿನ ಮಾರ್ಚ್ 31 ರೊಳಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್​​​ಗಳನ್ನು ವಿತರಿಸುವ ತೀರ್ಮಾನ ಕೈಗೊಂಡಿದ್ದೇವೆ” ಎಂದು ಸದನಕ್ಕೆ ತಿಳಿಸಿದರು.

ನಂತರ ಶಾಸಕಿ ನಯನಾ ಮೋಟಮ್ಮ, “ತಾಂತ್ರಿಕ ದೋಷದಿಂದ 5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡಿ” ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, “5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ 100ಕ್ಕೆ 90ರಷ್ಟು ಪಡಿತರ ಕಾರ್ಡ್‌ದಾರರಿಗೆ ಐದು ಕೆಜಿ ಅಕ್ಕಿಯ ಹಣ ಕೊಟ್ಟಿದ್ದೇವೆ. ಶೇ 5ರಷ್ಟು ಏರುಪೇರು ಇದರಲ್ಲಿ ಇದೆ, ಅದನ್ನೂ ಸರಿಪಡಿಸುತ್ತೇವೆ” ಎಂದರು.

RELATED ARTICLES

Related Articles

TRENDING ARTICLES