ಚಿಕ್ಕೋಡಿ : ಕೂಡಲಸಂಗಮದಲ್ಲಿ ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು. ನಾಳಿನ ಬಜೆಟ್ನಲ್ಲಿ ಈ ಕುರಿತು ಘೋಷಣೆ ಆಗಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಾಳೆ ರಾಜ್ಯ ಬಜೆಟ್ ಹಿನ್ನಲೆ ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿ, ಪ್ರಾರಂಭ ಮಾಡಿದ್ದು ಕೂಡಲಸಂಗಮದಲ್ಲಿ. ಕೂಡಲಸಂಗಮದಲ್ಲಿಯೇ ಧರ್ಮ ಸ್ಥಾಪನೆಯಾಗಿದೆ ಎಂದರು.
ಬಸವಣ್ಣನವರು ಲಿಂಗೈಕ್ಯೆ ಆಗಿದ್ದು ಕೂಡಲಸಂಗಮದಲ್ಲಿ, ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಕೂಡಲಸಂಗಮದ ಶಾಸಕ ಕಾಶಪ್ಪನವರ ಅವರಿಗೂ ತಿಳಿಸಿದ್ದೇನೆ. ಕೂಡಲಸಂಗಮ ಅಭಿವೃದ್ಧಿ ಇನ್ನೂ ಆಗಿಲ್ಲ ಎಂದು ಬೇಸರಿಸಿದರು.
ಮಲ್ಲಮ್ಮನ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಿ
ಬೆಳಗಾವಿಯ ಬೆಳವಡಿ ಮಲ್ಲಮ್ಮನ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಬೇಕು. ಫೆ.27, 28ರಂದು ಬೆಳವಾಡಿಯಲ್ಲಿ ಮಲ್ಲಮ್ಮನ ಉತ್ಸವ ಇದೆ. ಹಾಗಾಗಿ, ಸಿಎಂ ಸಿದ್ದರಾಮಯ್ಯನವರು ಪ್ರಾಧಿಕಾರ ಘೋಷಣೆ ಮಾಡಿ, ಉತ್ಸವದಲ್ಲಿಯೇ ಲೋಕಾರ್ಪಣೆ ಮಾಡಬೇಕು. ಬೆಳಗಾವಿಯ ಎಲ್ಲ ಸಚಿವರು, ಶಾಸಕರಲ್ಲಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಕಳನ್ನು ಈಡೇರಿಸಿ ತತ್ವ ಪ್ರಚಾರಕ್ಕೆ ಸ್ಪಂದಿಸಬೇಕು ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.