ಬೆಂಗಳೂರು : ಭಾರತದ ಯುವ ಬ್ಯಾಟರ್ ಸರ್ಫರಾಜ್ ಖಾನ್ ಚೊಚ್ಚಲ ಪಂದ್ಯದಲ್ಲಿಯೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಿದರು.
ರಾಜ್ಕೋಟ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿಯೇ ಸರ್ಫರಾಜ್ ಖಾನ್ ಬೊಂಬಾಟ್ ಅರ್ಧಶತಕ ಪೂರೈಸಿದರು.
ನಾಯಕ ರೋಹಿತ್ ಶರ್ಮಾ ಔಟಾದ ಬಳಿಕ ಕ್ರೀಸ್ಗೆ ಆಗಮಿಸಿದ ಯುವ ಬ್ಯಾಟರ್ ಬಿರುಸಿನ ಆಟಕ್ಕೆ ಮುಂದಾದರು. ರವೀಂದ್ರ ಜಡೇಜಾ ಜೊತೆಗೂಡಿ 77 ರನ್ಗಳ ಜೊತೆಯಾಟ ನೀಡಿ ತಂಡದ 300 ರನ್ ಗಡಿದಾಟಿಸಿದರು.
ಅರ್ಧಶತಕದ ಬಳಿಕವೂ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೆ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಮುನ್ಸೂಚನೆ ನೀಡಿದರು. ಆದರೆ, ಆಂಡರ್ಸನ್ ಎಸೆದ 82ನೇ ಓವರ್ನಲ್ಲಿ ರನ್ಔಟ್(ಮಾರ್ಕ್ ವುಡ್) ಆಗುವ ಮೂಲಕ ನಿರಾಸೆ ಮೂಡಿಸಿದರು. 66 ಎಸೆತಗಳನ್ನು ಎದುರಿಸಿದ ಸರ್ಫರಾಜ್ ಖಾನ್ 9 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 62 ರನ್ ಗಳಿಸಿದರು.
ಟೆಸ್ಟ್ ಕ್ಯಾಪ್ ತೊಡಿಸಿದ ಕುಂಬ್ಳೆ
ಭಾರತ ತಂಡದ 311ನೇ ಟೆಸ್ಟ್ ಆಟಗಾರನಾಗಿ ಸರ್ಫರಾಜ್ ಖಾನ್ ಇಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರು. 26 ವರ್ಷದ ಸರ್ಫರಾಜ್ ಖಾನ್ ಅವರಿಗೆ ದಿಗ್ಗಜ ಅನಿಲ್ ಕುಂಬ್ಳೆ ಟೆಸ್ಟ್ ಕ್ಯಾಪ್ ತೊಡಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.