ದಾವಣಗೆರೆ : ನನ್ನ ಇಲಾಖೆ ಕಷ್ಟದ ಇಲಾಖೆ, ಆದರೆ ಪುಣ್ಯದ ಕೆಲಸ. ಮಕ್ಕಳು ದೇವರ ಸಮಾನ. ಹೀಗಾಗಿ, ಅವರಿಗೆ ಶಿಕ್ಷಣ ನೀಡುವುದು ಪುಣ್ಯದ ಕೆಲಸ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಸೇವಾಲಾಲ್ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ 76 ಸಾವಿರ ಶಾಲೆಗಳು ಬರುತ್ತವೆ. 1 ಕೋಟಿ 20 ಲಕ್ಷ ಮಕ್ಕಳು ಓದುತ್ತಿದ್ದಾರೆ. ದೇಶದ ಆಸ್ತಿ ಶಿಕ್ಷಣ, ಶಿಕ್ಷಣ ಪಡೆದರೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಸೆ ಈಡೇರುತ್ತದೆ. ಮೆಡಿಕಲ್ ಕಾಲೇಜ್ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಬದ್ದ. ನಿಮ್ಮ ಸಹೋದರಾಗಿ ನಾನು ಧ್ವನಿ ಎತ್ತಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಬಂಗಾರಪ್ಪನವರು ಬೈದು ಕಳಿಸುತ್ತಿದ್ದರು
ಬಂಜಾರ ಸಮಾಜದವರು ಹಣಕ್ಕಾಗಿ ಸಹಾಯ ಕೇಳುತ್ತಾ ಬರುತ್ತಿದ್ದರು. ಆಗ ತಂದೆ ಎಸ್. ಬಂಗಾರಪ್ಪನವರು ಬೈದು ಕಳಿಸುತ್ತಿದ್ದರು. ನಿಮಗೆ ಒಂದು ಡೆಂಟರ್ ಕಾಲೇಜು ಕೊಡುತ್ತೇನೆ ಎಂದು ಒಂದೇ ದಿನದಲ್ಲಿ ನಿರ್ಧಾರ ಮಾಡಿದ್ರು. ಶಿಕ್ಷಣದಿಂದ ಸಮಾಜ ಮುಂದೇ ಬರಲು ಸಾಧ್ಯ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಸಿಎಂ ಸಂದೇಶ ಓದಿದ ಮಧು ಬಂಗಾರಪ್ಪ
ಸಿಎಂ ಸಿದ್ದರಾಮಯ್ಯನವರ ಸಂದೇಶ ಓದಿದ ಮಧು ಬಂಗಾರಪ್ಪ ಅವರು, ಬಂಜಾರ ಸಮುದಾಯಕ್ಕೆ ಸೇವಾಲಾಲ್ ಕೊಡುಗೆ ಅಪಾರ. ಸೇವಾಲಾಲ್ ಜನ್ಮಸ್ಥಳ ಕರ್ನಾಟಕದಲ್ಲಿ ಇರುವುದು ನಮಗೆ ಹೆಮ್ಮೆ. ಬಂಜಾರ ಸಮುದಾಯಕ್ಕೆ ಸರ್ಕಾರದಿಂದ ಹೆಚ್ಚು ಒತ್ತು ನೀಡುತ್ತೇವೆ ಎಂದು ತಿಳಿಸಿದರು.