ಬೆಂಗಳೂರು : ನಾನು ಪಟ್ಟಿ ಕೊಟ್ಟಿದ್ದೇನೆ ಅನ್ನೋದೆಲ್ಲ ಸುಳ್ಳು ರೀ.. ನಾನು ಯಾವ ಪಟ್ಟಿನೂ ಎಐಸಿಸಿಗೆ ಕಳುಹಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನೊಬ್ಬನಿಗೆ ಮಾತ್ರ ಗೊತ್ತು. ಯಾರು ಯಾರು ಏನೇನು ವರದಿ ಕೊಟ್ಟಿದ್ದಾರೆ ಅಂತ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಪಾಪ ಸಿಎಂ ಬಳಿ ಇರಲಿ ಅಂತ ಇವತ್ತು ನಾನು ಒಂದು ಕಾಪಿ ಕೊಟ್ಟಿದ್ದೇನೆ. ಅವರು ಮುಖ್ಯಮಂತ್ರಿ, ಅವರ ಸಂಪುಟದಲ್ಲಿ ನಾವು ಸಚಿವರು. ನಾವುಗಳು ವರದಿ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕಾಗುತ್ತದೆ. ರಾಜಕಾರಣದಲ್ಲಿ ಸಚಿವರು, ಶಾಸಕರು ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದು ಹೇಳಿದರು.
ಈ ಸಭೆ ದೆಹಲಿಯಲ್ಲೇ ನಡೆಯಬೇಕಿತ್ತು
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ವೀಕ್ಷಕರು, ಜಿಲ್ಲಾ ಮಂತ್ರಿಗಳು ಕಾರ್ಯಕರ್ತರ ಅಭಿಪ್ರಾಯ, ಸರ್ವೆ ರಿಪೋರ್ಟ್ ಬಗ್ಗೆ ಪರಾಮರ್ಶೆ ಮಾಡಿದ್ದೇವೆ. ಮತ್ತೊಂದು ಸರ್ವೆ ಮಾಡಿ ರಿಪೋರ್ಟ್ ಪಡೆದು ಚರ್ಚೆ ಮಾಡ್ತೀವಿ. ಈ ಸಭೆ ದೆಹಲಿಯಲ್ಲೇ ನಡೆಯಬೇಕಿತ್ತು, ಅಧಿವೇಶನ ಇರುವುದರಿಂದ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ನಾನು ಕೊಟ್ಟಿರುವ ಪಟ್ಟಿಯಲ್ಲ ಅದು
ಇವತ್ತು ಶಾಸಕಾಂಗ ಪಕ್ಷದ ಸಭೆ ಇದೆ, ಅಲ್ಲಿ ಈ ಟೀಂ ಇರುತ್ತೆ. ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆ ಮಾಡಲೇಬೇಕು. 50% ಆದರೂ ಕೆಲಸ ಶುರು ಮಾಡಬೇಕಲ್ವಾ..? ನಾನು ಕೊಟ್ಟಿರುವ ಪಟ್ಟಿಯಲ್ಲ ಅದು, ವೀಕ್ಷಕರು ಜಿಲ್ಲಾ ಮಂತ್ರಿಗಳು ಏನು ಹೆಸರು ಕೊಟ್ಟಿದ್ರೋ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.