Monday, May 20, 2024

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ; ಫೆ.17ರಿಂದ ಕಚೇರಿಗಳಲ್ಲಿ ಫೋಟೋ ಅಳವಡಿಕೆ

ಬೆಂಗಳೂರು : ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕ- ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ‌ ವಿವೇಕ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫೆ.17 ರಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವಣ್ಣರ ನೂತನ ಭಾವಚಿತ್ರ ಅನಾವರಣಗೊಳಿಸಲಾಗುತ್ತದೆ.‌ ಪ್ರತಿ ಭಾವಚಿತ್ರದ‌‌ ಕೆಳಗಡೆ ಸಾಂಸ್ಕೃತಿಕ ನಾಯಕ ಬಸವಣ್ಣ ಅಂತ ಬರೆಯುತ್ತೇವೆ. ಬುದ್ಧ, ಬಸವಣ್ಣ, ಗಾಂಧಿ ಹಾಗೂ ಅಂಬೇಡ್ಕರ್ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತದೆ. ಇವರು ನಮ್ಮ ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದರು.

ಮೌಢ್ಯಗಳನ್ನು ಸಮಾಜದಲ್ಲಿ ನೋಡಿದ್ದೇವೆ. ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣ ಆಗಬೇಕು ಎಂದು ಬಸವಣ್ಣ ಕನಸು ಕಂಡಿದ್ದರು. ಅದರಂತೆಯೇ ಬಸವಣ್ಣ ನಡೆದುಕೊಂಡಿದ್ದರು. ಇದು ಜನಪರವಾದ ಸಮಾಜ. ಆಡು ಮಾತಿನಲ್ಲೇ ಬಸವಣ್ಣ ವಚನ ರೂಪಿಸಿದ್ದವರು. ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚನೆ‌ ಮಾಡಿದ್ದಾರೆ.

ನನಗೆ ಸಂಸ್ಕೃತ ಭಾಷೆ ಗೊತ್ತಾಗಲ್ಲ. ಕನ್ನಡ ಬಾಷೆಯಲ್ಲಿ ವಚನಗಳನ್ನು ಜನರಿಗೆ ಅರ್ಥ ಆಗುವ ರೀತಿಯಲ್ಲಿ ಹೇಳುತ್ತಿದ್ದರು. ಕಾಗೆ ಒಂದು ಅಗುಳ ಕಂಡರೆ ಕರೆಯದೆ ತನ್ನ ಬಳಗವ, ಕೋಳಿ ಒಂದು ಕುಟುಕ ಕಂಡೊಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ, ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಳಿಗಿಂತ ಕರಕಷ್ಟ ಕೂಡಲಸಂಗಮದೇವಾ ಎಂದು ಬಸವಣ್ಣರ ವಚನಗಳನ್ನು ಉಲ್ಲೇಖಿಸಿದರು.

ಇದನ್ನೂ ಓದಿ: ಆಸ್ಟ್ರೇಲಿಯಾ ಓಪನ್ ನಲ್ಲಿ ರೋಹನ್​ ಬೋಪಣ್ಣ ಐತಿಹಾಸಿ ಸಾಧನೆ: 50 ಲಕ್ಷ ಬಹುಮಾನ ಘೋಷಿಸಿದ ಸಿಎಂ

ಈ ವೇಳೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ‌ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES