ಬೆಂಗಳೂರು : ರೈತರ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ (MSP) ಕೊಡುವ ಗ್ಯಾರಂಟಿ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಛತ್ತೀಸಗಢದ ಅಂಬಿಕಾಪುರದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆ (MSP) ಸೇರಿ ಇತರೆ ಕಾನೂನು ಜಾರಿಗೊಳಿಸುತ್ತೇವೆ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್ ಈ ಸಲ ಐತಿಹಾಸಕ ಪ್ರತಿಜ್ಞೆ ತೆಗೆದುಕೊಂಡಿದೆ. ಸ್ವಾಮಿನಾಥನ್ ವರದಿ ಪ್ರಕಾರ MPS ಕಾನೂನು ರೂಪಿಸುವ ಮೂಲಕ ದೇಶದ 15 ಕೋಟಿ ರೈತರಿಗೆ ಅನುಕೂಲ ಮಾಡಿಕೊಡಲಿದ್ದೇವೆ. ಇದು ರೈತರಿಗೆ ನೀಡುವ ಮೊದಲ ಗ್ಯಾರಂಟಿ ಎಂದು ಹೇಳಿದ್ದಾರೆ.
ಎಂಎಸ್‌ಪಿ ಮೇಲಿನ ನಮ್ಮ ಕಾನೂನು ಬದ್ಧ ಖಾತರಿ ರೈತರ ಜೀವನದಲ್ಲಿ 3 ದೊಡ್ಡ ಬದಲಾವಣೆಗಳನ್ನು ತರುತ್ತದೆ. ಬೆಳೆಗೆ ಸರಿಯಾದ ಬೆಲೆ ಸಿಗುವುದರಿಂದ ರೈತ ಸಾಲದ ಬಾಧೆಯಿಂದ ಮುಕ್ತನಾಗುತ್ತಾನೆ. ಯಾವುದೇ ರೈತ ಆತ್ಮಹತ್ಯೆಯ ಸ್ಥಿತಿಗೆ ತಲುಪುವುದಿಲ್ಲ. ಕೃಷಿ ಲಾಭದಾಯಕ ವ್ಯವಹಾರವಾಗಲಿದೆ ಮತ್ತು ರೈತರು ಸಮೃದ್ಧರಾಗುತ್ತಾರೆ. ಮತ್ತು ಸಮೃದ್ಧ ರೈತ ದೇಶದ ಭವಿಷ್ಯವನ್ನು ಬದಲಾಯಿಸುತ್ತಾನೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಐದು ಗ್ಯಾರಂಟಿಗಳು ಯಶಸ್ವಿ
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕರ್ನಾಟಕದಲ್ಲಿ ಐದು ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಿವೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲೂ ಕೂಡ ಇನ್ನಷ್ಟು ಗ್ಯಾರಂಟಿಗಳು ಜಾರಿಯಾಗಲಿವೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಇಂದು ಅನ್ನದಾತರಿಗಾಗಿ ಮಹತ್ವದ ಗ್ಯಾರಂಟಿಯೊಂದನ್ನು ಘೋಷಿಸಿದ್ದಾರೆ. ನಮ್ಮ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಖಚಿತ ಎಂದು ಹೇಳಿದ್ದಾರೆ.