ಬೆಂಗಳೂರು : ‘ಉಚಿತ ಗ್ಯಾರಂಟೆಗಳಿಂದ ಗೆಲ್ಲುತ್ತೇವೆ ಎನ್ನುವ ಭ್ರಮೆ ಇದ್ದರೆ ದಡ್ಡರು’ ಎಂದು ತಮ್ಮದೇ ಪಕ್ಷದ ಹೈಕಮಾಂಡ್ ವಿರುದ್ಧ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಮತ್ತೆ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಒಂದು ವರ್ಷ ಮುಂಚಿತವಾಗಿ ಗ್ಯಾರಂಟಿ ತಂದ್ರು, ಜನ ವೋಟ್ ಹಾಕಲಿಲ್ಲ. ನಾವು ಸಿಎಂ ಸಮಯವಕಾಶ ಕೇಳಿರೋದಕ್ಕೆ ತುಂಬಾ ಡಿಮ್ಯಾಂಡ್‌ಗಳಿವೆ. ಅವುಗಳನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ನನ್ನ ಜಿಲ್ಲೆಯಲ್ಲಿ ನಿಗಮ ಮಂಡಳಿ ಯಾರಿಗೆ ಕೊಡಬೇಕು ಎಂದು ನಾನು ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇಬ್ಬರು ಹೇಳಿದ್ದೇವೆ. ಯಾರನ್ನಾದರೂ ಮಾಡಲಿ, ನಮ್ಮ ಗಮನಕ್ಕೆ ತರಬೇಕಲ್ಲವೇ..? ಯಾವನೋ ಪಿಕ್ ಪಾಕೆಟ್ ಮಾಡೋನನ್ನ, ಬಡ್ಡಿ ವ್ಯವಹಾರ ಮಾಡೋರನ್ನೆಲ್ಲಾ ಸೇರಿಸಿದ್ರೆ ಹೇಗೆ..? ಎಂದು ಅಸಮಾಧಾನ ಹೊರಹಾಕಿದ್ದಾರೆ.
ಯಾವನ ಯೋಗ್ಯತೆ ಏನು? ಯಾರಿಗೆ ಕೊಟ್ರೆ ಅನುಕೂಲ
ಯಾವನ ಯೋಗ್ಯತೆ ಏನು? ಯಾರಿಗೆ ಕೊಟ್ಟರೆ ಪಕ್ಷಕ್ಕೆ ಅನುಕೂಲ ಅಂತ ನಮಗೆ ಗೊತ್ತಿರುತ್ತದೆ. ಬೇರೆ ದೇಶದಲ್ಲಿ ಕುಳಿತು ಇಲ್ಲಿ ತಂದು ಹಾಕಿದ್ರೆ ಕಾರ್ಯಕರ್ತರ ಗತಿ ಏನು..? ನಾವು ಪಕ್ಷ ಹೆಚ್ಚು ಶಕ್ತಿ ಆಗಬೇಕು ಎಂದು ಹೇಳಿದ್ದೇವೆ. ಅದನ್ನ ಬಿಟ್ಟು ಮಾಡುವುದಾದರೆ ಮಾಡಲಿ. ಯಾರು ನಿಗಮ ಮಂಡಳಿ ಪಟ್ಟಿಗೆ ಹೊರಗಿನವರನ್ನ ಸೇರಿಸಿದ್ದಾರೋ ಅವರಿಗೆ ಅರ್ಥ ಆಗುತ್ತೆ, ನಮ್ಮ ಹೇಳಿಕೆ ಎಂದು ಕೆ.ಎನ್. ರಾಜಣ್ಣ ಸ್ವಪಕ್ಷದ ನಾಯಕರ ಮೇಲೆ ಹರಹಾಯ್ದಿದ್ದಾರೆ.