ಕಲಬುರಗಿ : ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳು ಪತ್ತೆಯಾದ ಬೆನ್ನಲ್ಲೇ ದೇಶಾದ್ಯಂತ ಹಲವು ಮಸೀದಿಗಳಲ್ಲಿ ದೇವರ ವಿಗ್ರಹಗಳು ಪತ್ತೆಯಾಗ್ತಿವೆ.
ಈ ನಡುವೆ ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಒಳಗಡೆ ಪುರಾತನ ರಾಘವ ಚೈತನ್ಯ ಶಿವಲಿಂಗ ಪತ್ತೆಯಾಗಿತ್ತು. ಶಿವರಾತ್ರಿ ದಿನ ಈ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಸಂಘಟನೆಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
2022ರಲ್ಲಿ ಮಹಾ ಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಮಾಡಲು ಹಿಂದೂ ಕಾರ್ಯಕರ್ತರು, ಬಿಜೆಪಿಗರು ದರ್ಗಾಗೆ ಹೋಗಿದ್ದರು. ಈ ವೇಳೆ ಎರಡು ಧರ್ಮಗಳ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಘಟನೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಡಿಸಿ, ಎಸ್ಪಿಯವರ ಕಾರುಗಳು ಜಖಂ ಆಗಿದ್ದವು.
ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ
2022ರಲ್ಲಿ ನಡೆದ ಘರ್ಷಣೆ ಬಳಿಕ 2023ರಲ್ಲಿ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಕಲಬುರಗಿ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಅನುಮತಿ ನೀಡಿತ್ತು. 2023ರಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಮಾಡಲಾಗಿತ್ತು. ಇದೀಗ ಮಹಾ ಶಿವರಾತ್ರಿ ಹತ್ತಿರ ಆಗ್ತಿದ್ದಂತೆ ಈ ವರ್ಷವೂ ಪೂಜೆ ಸಲ್ಲಿಸಲು ಹಿಂದೂ ಸಂಘಟನೆಗಳು ಮುಂದಾಗಿವೆ.
ಪೂಜೆ ಬಳಿಕ ದೇವಸ್ಥಾನಕ್ಕೆ ಗುದ್ದಲಿ ಪೂಜೆ
ರಾಘವ ಚೈತನ್ಯ ದೇವಸ್ಥಾನ ಕಟ್ಟುವಂತೆ ಸ್ಥಳೀಯ ಆಡಳಿತಕ್ಕೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನ ಕಟ್ಟಲು ಗುದ್ದಲಿ ಪೂಜೆ ಮಾಡಲು ಹಿಂದೂ ಸಂಘಟಕರು ಮುಂದಾಗುತ್ತಿದ್ದಾರೆ.
ಮಹಾ ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಧರ್ಮ-ದೇಗುಲ ದಂಗಲ್ ಜೋರಾಗ್ತಿದೆ. ಇನ್ನು ದರ್ಗಾದಲ್ಲಿ ದೇವಾಲಯ ನಿರ್ಮಿಸಲು ಅನುಮತಿ ಸಿಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.