ರಾಯಚೂರು : ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಜಪ್ತಿ ಮಾಡಿದ್ದಕ್ಕೆ ಶಾಸಕಿ ಕರೆಮ್ಮ ಪುತ್ರ, ಆಪ್ತ ಸಹಾಯಕರು ಸೇರಿ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದ್ರೆ, ನನ್ನ ಹೆಸರು ಕೆಡಿಸಲು ಹುನ್ನಾರ ನಡೆದಿದೆ ಎಂದು ಆರೋಪಿಸಿ ಶಾಸಕರು ರಾತ್ರಿಯಿಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಕಾನ್ಸ್ಟೇಬಲ್ ಹನುಮಂತರಾಯ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಜಪ್ತಿ ಮಾಡಿದ್ರು. ಈ ವಿಚಾರ ಗೊತ್ತಾಗಿ ಶಾಸಕಿ ಕರೆಮ್ಮ ಪುತ್ರ ಸಂತೋಷ್ ಹನುಮಂತರಾಯಗೆ ಕರೆ ಮಾಡಿ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರಕ್ಕೆ ಬರುವಂತೆ ಹೇಳಿದ್ದಾರೆ. ಕೋಣೆಯೊಳಗೆ ಹೋಗ್ತಿದ್ದಂತೆ ಅಲ್ಲಿದ್ದ ಮರಳು ದಂಧೆಕೋರರು ಸೇರಿ ಸಂತೋಷ್, ತಿಮ್ಮಾರೆಡ್ಡಿ, ಆಪ್ತ ಸಹಾಯಕ ಇಲಿಯಾಸ್, ರಫೀಕ್ ಸೇರಿ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದನೆ
ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಾನ್ಸ್ಟೇಬಲ್ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇದೆ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಶಾಸಕಿ ಪುತ್ರ ಸಂತೋಷ್ ಸೇರಿ 8 ಜನ ವಿರುದ್ದ ಕೇಸ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಕ್ರಮ ಮರಳುಗಾರಿಕೆಗೆ ಸಾಥ್?
ಇನ್ನು ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ SP ನಿಖಿಲ್ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಶಾಸಕಿ ಪ್ರತಿಭಟನೆ ಹಿಂಪಡೆದಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸಿ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.