ದಾವಣಗೆರೆ : ನಾನು ಸಿಎಂ ಚೇರ್ನಲ್ಲಿ ಕೂತಾಗ ಪ್ರತಿ ದಿನವೂ ಇದು ಕೊನೆ ದಿನ ಅಂತ ಕೆಲಸ ಮಾಡುತ್ತಿದ್ದೆ. ಅಂದಾಗ ಮಾತ್ರ ಏನಾದರೂ ಕೆಲಸ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಲ್ಮೀಕಿ ಸಮುದಾಯದ ಮೀಸಲಾತಿ ಜೇನುಗೂಡಿಗೆ ಕೈ ಹಾಕಬೇಡಿ ಅಂದ್ರು. ಆದರೆ, ಸಮುದಾಯಕ್ಕೆ ಒಳ್ಳೆಯದು ಮಾಡುವುದಕೋಸ್ಕರ ಮೀಸಲಾತಿ ಹೆಚ್ಚಿಸಿ, ಗೆಜೆಟ್ ನೋಟಿಫಿಕೇಶನ್ ಮಾಡಿದೆ ಎಂದರು.
ಅಯೋಧ್ಯೆಯಲ್ಲಿ ವಾಲ್ಮೀಕಿ ಮಠ
ಅಧಿಕಾರ ಯಾವಾಗಲೂ ಶಾಶ್ವತ ಅಲ್ಲ. ಅಯೋಧ್ಯೆಯಲ್ಲಿ ವಾಲ್ಮೀಕಿ ಮಠ ನಿರ್ಮಾಣ ಮಾಡಬೇಕು ಎನ್ನುವುದು ನಿಮ್ಮ ಆಸೆ. ಈ ಆಸೆ ಏನಿದೆ ಅದನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸುವ ಕೆಲಸ ಮಾಡ್ತೀನಿ ಎಂದು ಭರವಸೆ ನೀಡಿದರು.
ನೀವು ಅವಿದ್ಯಾವಂತರಾಗಬಾರದು
ಶ್ರೇಷ್ಠ ಕೃತಿ ಇದ್ದರೆ ಅದು ವಾಲ್ಮೀಕಿ ರಾಮಾಯಣ. ಜಗತ್ತಿನ 10 ಶ್ರೇಷ್ಠ ಗ್ರಂಥಗಳಲ್ಲಿ ಅತ್ಯುನ್ನತ ಮಟ್ಟದಲ್ಲಿ ವಾಲ್ಮೀಕಿ ರಾಮಾಯಣ ಇದೆ. ನೀವು ಅಂತ ಕುಲಕ್ಕೆ ಸೇರಿದ್ದೀರಿ ಅಂದರೆ ನೀವು ಅವಿದ್ಯಾವಂತರಾಗಬಾರದು. ಹಿಂದೂ ಧರ್ಮವನ್ನ ಕಾಪಾಡಿಕೊಂಡು ಬಂದಿದ್ದು ವಾಲ್ಮೀಕಿ ಸಮುದಾಯ ಎಂದು ಹೇಳಿದರು.
ಮೀಸಲಾತಿ ಹೆಚ್ಚು ಮಾಡಿದ್ದು ನಾವು
ವಾಲ್ಮೀಕಿ ಸಮುದಾಯವನ್ನ STಗೆ ಸೇರಿಸಿದ್ದು ಹಿಂದೆ ಹೆಚ್.ಡಿ ದೇವೆಗೌಡರು. ಇದೀಗ ನಿಮಗೆ ಮೀಸಲಾತಿ ಹೆಚ್ಚು ಮಾಡಿದ್ದು ನಾವು. ಬೇರೆ ದೇಶದಲ್ಲಿ ಸತ್ತ ಸಂವಿಧಾನ ಇದೆ. ಆದರೆ, ನಮ್ಮ ದೇಶದಲ್ಲಿ ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಬಹುದು. ಆದರೆ, ಬೇರೆ ದೇಶದಲ್ಲಿ ಇರುವ ಸಂವಿಧಾನ ತಿದ್ದುಪಡಿ ಮಾಡೋಕೆ ಬರಲ್ಲ. ಅವುಗಳು ಸತ್ತ ಸಂವಿಧಾನ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.