Sunday, December 22, 2024

ಮಂಡ್ಯಕ್ಕೆ ಮತ್ತೆ ಗುರಿಯಿಟ್ಟ ‘ಸ್ವಾಭಿಮಾನಿ’ : ದಿಲ್ಲಿಯಲ್ಲಿ ಸಂಸದೆ ಸುಮಲತಾ ಲಾಬಿ

ಬೆಂಗಳೂರು : ಮಂಡ್ಯ ಅಂದ್ರೆ ಇಡೀ ಇಂಡಿಯಾನೇ ತಿರುಗಿ ನೋಡುತ್ತೆ. ಯಾಕಂದ್ರೆ, ಮಂಡ್ಯ ಲೋಕಸಭಾ ಕ್ಷೇತ್ರವೇ ಹಾಗೆ. ಕಳೆದ ಬಾರಿ ‘ಸ್ವಾಭಿಮಾನ’ ಸದ್ದು ದೊಡ್ಡ ಸುದ್ದಿಯಾಗಿತ್ತು. ಅದಾಗಿ 5 ವರ್ಷ ಕಳೆದಿದೆ.

ಮತ್ತೆ ಲೋಸಭೆ ಚುನಾವಣೆ ಬರ್ತಿದೆ. ಮಂಡ್ಯದಿಂದ ಮೈತ್ರಿ ಅಭ್ಯರ್ಥಿ ಯಾರು..? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಸುಮಲತಾ ಮಂಡ್ಯ ಬಿಡಲ್ಲ ಅಂತಿದ್ದಾರೆ. ಇತ್ತ ಮದ್ದೂರು ಶಾಸಕ ಜೆಡಿಎಸ್​​ನವರಿಗೆ ಗಂಡಸ್ತನದ ಸವಾಲು ಹಾಕಿದ್ದಾರೆ.

ಒಂದು ಫೋಟೋ ಸಾವಿರ ಪದಗಳನ್ನು ಹೇಳುತ್ತೆ ಅಂತಾರೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ. ಮಂಡ್ಯ ಲೋಕಸಭೆ ಬಿಜೆಪಿ ಟಿಕೆಟ್ ಫೈಟ್ ಶುರುವಾಗಿರುವಾಲೇ ಲಾಬಿಗಳು ಜೋರಾಗ್ತಿವೆ. ಮಂಡ್ಯ ಮೇಲೆ ಮತ್ತೆ ಕಣ್ಣು ನೆಟ್ಟಿರುವ ಸುಮಲತಾ, ದೆಹಲಿ ಬಿಜೆಪಿ ಹೈಕಮಾಂಡ್ ಮುಂದೆ ಲಾಬಿ ಶುರುಮಾಡಿದ್ದಾರೆ. ಅದಕ್ಕೆ ಈ ಫೋಟೋಗಳೇ ಒತ್ತಿ ಒತ್ತಿ ಹೇಳುತ್ತಿವೆ.

ಸ್ವಾಭಿಮಾನಿ Meets ಜೆ.ಪಿ ನಡ್ಡಾ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್​ರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ರು. ಈ ಭೇಟಿಗಳು ಅನೌಪಚಾರಿಕವಾಗಿದ್ರೂ, ಸಂಸದೆ ಸುಮಲತಾ ಅವರು, ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ಗಂಡಸರು ಇಲ್ವಾ..?

ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್, ಜೆಡಿಎಸ್​​ಗೆ ಟಾಂಗ್ ಕೊಟ್ಟಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಮಂಡ್ಯದಲ್ಲಿ ಗಂಡಸರು ಇಲ್ವಾ..? ಯಾಕೆ ಬೇರೆ ಯಾವುದೋ ಜಿಲ್ಲೆಯವರು ಬರಬೇಕು..? ಎಂದು ಕೆಣಕಿ ಸವಾಲು ಹಾಕಿದ್ದಾರೆ. ಮಂಡ್ಯಕ್ಕೆ ಲೀಡರ್ ಮಕ್ಕಳು, ಕುಟುಂಬಸ್ಥರೇ ಬರಬೇಕಾ..? ಎಂದಿದ್ದಾರೆ. ಐದು ವರ್ಷ ನಿಖಿಲ್ ಎಲ್ಲೋಗಿದ್ರು..? ಮಂಡ್ಯಕ್ಕೆ ಯಾರೇ ಬರಲಿ ಚಿಂತೆ ಇಲ್ಲ. ಜನಾಭಿಪ್ರಾಯ ಕಾಂಗ್ರೆಸ್ ಪರವಿದೆ ಎಂದಿದ್ದಾರೆ.

ಮಂಡ್ಯ ಬಿಜೆಪಿ ಟಿಕೆಟ್ ಯಾರಿಗೆ?

ಮತ್ತೊಂದೆಡೆ ಮಾಜಿ ಸಚಿವ ನಾರಾಯಣಗೌಡ ಕಾಂಗ್ರೆಸ್‌ ಸೇರ್ಪಡೆ ಸುಳಿವು ಕೊಟ್ಟಿದ್ದಾರೆ ಸಚಿವ ಚಲುವರಾಯಸ್ವಾಮಿ. 10 ದಿನಗಳ ಒಳಗೆ ಇದರ ಬಗ್ಗೆ ಚಿತ್ರಣ ಗೊತ್ತಾಗುತ್ತದೆ. ನಾರಾಯಣಗೌಡ ಬರ್ತಾರೆ ಅಂತಾನೂ‌ ಹೇಳಲ್ಲ, ಬೇರೆ ಅವರು ಬರಲ್ಲ ಅಂತಾನೂ ಹೇಳಲ್ಲ ಎಂದಿದ್ದಾರೆ.

ಒಟ್ನಲ್ಲಿ, ಮಂಡ್ಯ ಬಿಜೆಪಿ ಟಿಕೆಟ್ ಯಾರಿಗೆ ಅನ್ನೋದೇ ಕುತೂಹಲ ಮೂಡಿಸಿದೆ. ಟಿಕೆಟ್ ಘೋಷಣೆ ಆಗೋ ತನಕ ಯಾರಿಗೆ ಲಾಟರಿ ಹೊಡೆಯುತ್ತೆ ಅಂತ ಹೇಳೋಕು ಆಗಲ್ಲ. ಅದಕ್ಕೆ ಸ್ವಲ್ಪ ದಿನ ಕಾಯಲೇಬೇಕು.

RELATED ARTICLES

Related Articles

TRENDING ARTICLES